ರಾಯಚೂರು: ಆನ್‌ಲೈನ್ ಮೂಲಕ ಔಷಧಿ ಮಾರಾಟವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಳಿಗ್ಗೆಯಿಂದಲೇ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ವ್ಯಾಪಾರಿಗಳು, ಆನ್‌ಲೈನ್ ಔಷಧಿ ಮಾರಾಟದಿಂದ ಸ್ಥಳೀಯ ಔಷಧಿ ಅಂಗಡಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಪೋರೇಟ್ ಕಂಪನಿಗಳು ದೇಶವ್ಯಾಪಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸುವುದರಿಂದ ಅವರಿಗೆ ಹೆಚ್ಚಿನ ರಿಯಾಯಿತಿ ದೊರೆಯುತ್ತದೆ. ಇದೇ ಕಾರಣದಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಅಂತಹ ಸ್ಪರ್ಧೆಯನ್ನು ಸ್ಥಳೀಯ ಔಷಧಿ ಅಂಗಡಿಗಳು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಯಾವುದೇ ಔಷಧಿ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳಿದ್ದು, ವಿಶೇಷವಾಗಿ ಹ್ಯಾಬಿಟ್ ಫಾರ್ಮಿಂಗ್ ಡ್ರಗ್‌ಗಳು ಹಾಗೂ ನಿಯಮಿತ ಬಳಕೆಯ ಔಷಧಿಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುತ್ತಿರುವುದು ಔಷಧಿ ವ್ಯಾಪಾರದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಈ ರೀತಿಯ ಮಾರಾಟವನ್ನು ತಕ್ಷಣವೇ ತಡೆಗಟ್ಟಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮುರುಳಿಧರ, ಪ್ರಮುಖರಾದ ಪಿ. ವೆಂಕಟೇಶ, ಗೌತಮ್ ಗಿಯಾ ಸೇರಿದಂತೆ ಹಲವು ಔಷಧಿ ವ್ಯಾಪಾರಿಗಳು ಭಾಗವಹಿಸಿದ್ದರು.




Recent Comments