Friday, June 5, 2026
Google search engine
Homeರಾಜ್ಯಸಫಾಯಿ ಕರ್ಮಚಾರಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಆಗ್ರಹ

ಸಫಾಯಿ ಕರ್ಮಚಾರಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಆಗ್ರಹ

ರಾಯಚೂರು: ಸಫಾಯಿ ಕರ್ಮಚಾರಿಗಳ ಸಮುದಾಯದ ಸಮಸ್ಯೆಗಳು ವರ್ಷಗಳಿಂದ ಬಗೆಹರಿಯದೇ ಉಳಿದಿದ್ದು, ಈ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಪ್ರಾತಿನಿಧ್ಯ ಮತ್ತು ಉನ್ನತ ಸ್ಥಾನಮಾನ ನೀಡಬೇಕು ಎಂದು ಸಫಾಯಿ ಕರ್ಮಚಾರಿಗಳ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಭಾಸ್ಕರ್ ಬಾಬು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಫಾಯಿ ಕರ್ಮಚಾರಿಗಳಿಗೆ ರಾಷ್ಟ್ರ ಮಟ್ಟದ ಗುರುತಿನ ಚೀಟಿ ನೀಡುವುದು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಮುದಾಯದ ಬೇಡಿಕೆಗಳತ್ತ ಗಂಭೀರವಾಗಿ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಫಾಯಿ ಕರ್ಮಚಾರಿ ಆಯೋಗ ಹಾಗೂ ಅಭಿವೃದ್ಧಿ ನಿಗಮದಲ್ಲಿ ಈ ಸಮುದಾಯದ ಪ್ರತಿನಿಧಿಗಳಿಗೆ ಅವಕಾಶ ನೀಡದೇ ಇರುವುದೇ ಪ್ರಮುಖ ಸಮಸ್ಯೆಯಾಗಿದೆ. ಸಮುದಾಯದ ನೈಜ ಸಮಸ್ಯೆಗಳನ್ನು ಅರಿತವರೇ ಅಧಿಕಾರದಲ್ಲಿಲ್ಲದ ಕಾರಣ ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಹೇಳಿದರು.
ಸಫಾಯಿ ಕರ್ಮಚಾರಿ ಸಮುದಾಯದಲ್ಲಿ ಅರ್ಹ ಹಾಗೂ ಅನುಭವ ಹೊಂದಿದ ಅನೇಕ ಮುಖಂಡರಿದ್ದರೂ ಅವರಿಗೆ ಆಯೋಗ ಅಥವಾ ಅಭಿವೃದ್ಧಿ ನಿಗಮಗಳಲ್ಲಿ ಅವಕಾಶ ಸಿಗುತ್ತಿಲ್ಲ. ಪರಿಶಿಷ್ಟ ಜಾತಿಯಲ್ಲಿಯೇ ಅತಿ ಹಿಂದುಳಿದ ಸಮುದಾಯವಾಗಿದ್ದರೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ರಾಜಕೀಯ ಕ್ಷೇತ್ರದಲ್ಲಿಯೂ ಈ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ಹಿಡಿದು ತಾಲೂಕು, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಮಟ್ಟದವರೆಗೂ ಸಮುದಾಯದವರಿಗೆ ಅವಕಾಶ ಸಿಗದೇ ಇರುವುದರಿಂದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿ ಸಮುದಾಯದವರಿಗೆ ನಾಮನಿರ್ದೇಶಿತ ಸದಸ್ಯ ಸ್ಥಾನ ನೀಡಬೇಕು. ಜೊತೆಗೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ಈ ಸಮುದಾಯದ ಪ್ರತಿನಿಧಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಐಪಿಡಿ ಸಾಲಪ್ಪನವರ ವರದಿಯನ್ನು ತಕ್ಷಣ ಜಾರಿಗೆ ತರಬೇಕು. ಸಫಾಯಿ ಕರ್ಮಚಾರಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳಿಗೆ ಕಲ್ಯಾಣ ಕರ್ನಾಟಕ ಭಾಗದ ಅರ್ಹ ವ್ಯಕ್ತಿಗಳನ್ನು ನೇಮಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಂ. ವಸಂತ, ಪ್ರಸಾದ್, ಗೋಪಾಲರೆಡ್ಡಿ, ಗೀತಾ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments