ರಾಯಚೂರು: ಜಿಲ್ಲೆಯ ಹೊರವಲಯದ ಯರಮರಸ್ ಸಮೀಪ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಸ್ಥಳಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಭೇಟಿ ನೀಡಿ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಮಂಗಳವಾರ ಸಂಜೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮೊದಲು ರನ್‌ವೇ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಒಟ್ಟು 1.7 ಕಿ.ಮೀ ಉದ್ದದ ರನ್‌ವೇ ಪೈಕಿ ಇದುವರೆಗೆ ಸುಮಾರು 850 ಮೀಟರ್ ಭಾಗಕ್ಕೆ ಮರಂ ಹಾಕಲಾಗಿದ್ದು, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಳಿಕ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯ ಹಂತಗಳ ಕುರಿತು ಮಾಹಿತಿ ಪಡೆದರು. ಈಗಾಗಲೇ ಕಟ್ಟಡದ ಕಾಲಂ ಹಾಗೂ ಛತ್ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ರೂಫ್ ಟ್ರಸ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಇದೇ ವೇಳೆ ಎಲೆಕ್ಟ್ರಿಕಲ್ ಸಬ್‌ಸ್ಟೇಷನ್ ಬಿಲ್ಡಿಂಗ್–1 ಹಾಗೂ ಬಿಲ್ಡಿಂಗ್–2 ಕಾಮಗಾರಿಗಳನ್ನು ಕೂಡ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಒಟ್ಟು 12 ಸೆಕ್ಯುರಿಟಿ ವಾಚ್ ಟವರ್‌ಗಳ ಪೈಕಿ 8 ಟವರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ವಿಮಾನ ನಿಲ್ದಾಣದ ಒಳಭಾಗದ ಆಂತರಿಕ ರಸ್ತೆ ಕಾಮಗಾರಿಯೂ ಸಾಗುತ್ತಿದೆ ಎಂದು ತಿಳಿಸಲಾಯಿತು.
ವಿಮಾನ ನಿಲ್ದಾಣದ ಸುತ್ತಲಿನ ಒಟ್ಟು 8 ಕಿ.ಮೀ ಉದ್ದದ ಕಾಂಪೌಂಡ್ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಾಮಗಾರಿಗೆ ವೇಗ ನೀಡಲು ಸೂಚನೆ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪೂವಿತಾ ಎಸ್., ವಿಮಾನ ನಿಲ್ದಾಣ ಕಾಮಗಾರಿಯನ್ನು ವೇಗಗೊಳಿಸಿ ಬಾಕಿ ಉಳಿದ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿತ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಲೇಔಟ್ ಕಾಮಗಾರಿಗಳಿಗೂ ಭೇಟಿ
ರಾಯಚೂರು ಹೊರವಲಯದ ದಂಡ್ ಗ್ರಾಮದ 108 ಹಾಗೂ ಏಗನೂರು ಗ್ರಾಮದ 30 ಮನೆಗಳ ಹಸ್ತಾಂತರ ಹಿನ್ನಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಲೇಔಟ್‌ಗಳಿಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲೇಔಟ್‌ಗಳಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ವೆಂಕಟೇಶ ಗಲಗ, ಸಹಾಯಕ ಅಭಿಯಂತರ ಮಹೇಶ್, ಕೆಎಂವಿ ಕಂಪನಿಯ ಪ್ರತಿನಿಧಿ ಪ್ರವೀಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Recent Comments