ಬೆಂಗಳೂರು: ದೇಶದ ರಾಜಕೀಯ ಮತ್ತು ಸಾಮಾಜಿಕ ಜಾಲತಾಣ ವಲಯದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಡಿಜಿಟಲ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮೇ 16ರಂದು ಆರಂಭವಾದ ಈ ಖಾತೆ ಕೆಲವೇ ದಿನಗಳಲ್ಲಿ ಇನ್ಸ್ಟಾಗ್ರಾಂನಲ್ಲಿ 14.4 ಮಿಲಿಯನ್ಗಿಂತ ಹೆಚ್ಚು ಹಿಂಬಾಲಕರನ್ನು ಪಡೆದು ದೇಶದ ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಖಾತೆಗಳನ್ನೇ ಮೀರಿಸಿದೆ.
ಪ್ರಸ್ತುತ ಕಾಂಗ್ರೆಸ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ಸುಮಾರು 13.3 ಮಿಲಿಯನ್ ಹಿಂಬಾಲಕರು ಇದ್ದರೆ, ಬಿಜೆಪಿಯ ಖಾತೆಗೆ ಸುಮಾರು 8.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈ ಹಿನ್ನೆಲೆಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಈ ಡಿಜಿಟಲ್ ಚಳವಳಿಗೆ ನಟಿ ಹಾಗೂ ಮಾಜಿ ಸಂಸದೆ Ramya ಅವರ ಪ್ರತಿಕ್ರಿಯೆಯೂ ಇದೀಗ ವೈರಲ್ ಆಗಿದೆ. ವ್ಲಾಗರ್ ಹಾಗೂ ನಟ Allan Gonsalves ಅವರು “ನಾನು ಕಾಕ್ರೋಚ್ ಜನತಾ ಪಾರ್ಟಿಯ ಮೊದಲ ಶಾಸಕನಾಗುತ್ತೇನೆ” ಎಂದು ಹೇಳಿರುವ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮ್ಯಾ, “ನನ್ನ ಮತ ನಿಮಗೆ” ಎಂದು ಕಮೆಂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.
2012ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ರಮ್ಯಾ, 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ನಂತರ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದ ಅವರು ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ’ ಕುರಿತ ಚರ್ಚೆಯಲ್ಲಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ.
ಈ ಚರ್ಚೆಗೆ ಮೂಲ ಕಾರಣವಾಗಿದ್ದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ Surya Kant ಅವರು ನೀಡಿದ್ದ ಹೇಳಿಕೆ. ಯುವ ನಿರುದ್ಯೋಗಿಗಳು, ಆರ್ಟಿಐ ಕಾರ್ಯಕರ್ತರು ಮತ್ತು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರನ್ನು “ಜಿರಳೆಗಳಂತೆ” ಎಂದು ಉಲ್ಲೇಖಿಸಿದ್ದರೆಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ಡಿಜಿಟಲ್ ಅಭಿಯಾನ ಶುರುವಾಯಿತು.
ಈ ಚಳವಳಿಗೆ ಸಂಬಂಧಿಸಿದ X ಖಾತೆಯನ್ನು ಭಾರತದಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಆದರೆ, “Cockroach Is Back” ಹೆಸರಿನಲ್ಲಿ ಮತ್ತೊಂದು ಖಾತೆ ಆರಂಭವಾಗಿದ್ದು, ಅದು ಕೆಲವೇ ಗಂಟೆಗಳಲ್ಲಿ ಸಾವಿರಾರು ಫಾಲೋವರ್ಸ್ ಪಡೆದುಕೊಂಡಿದೆ. ಈ ಕುರಿತು ಮಾತನಾಡಿರುವ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಗಳು ನಡೆದಿದ್ದವು. ಆದರೆ ಇದು ಸರ್ಕಾರದ ಸ್ವಯಂ ಗುರಿಯಾಗಿದೆ. ಕಾನೂನು ಹೋರಾಟ ಮುಂದುವರಿಯುತ್ತದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ‘ದಿ ಕಾಕ್ರೋಚ್ ಯೂತ್’, ‘ಐ ಆಮ್ ಕಾಕ್ರೋಚ್’, ‘ಕಾಕ್ರೋಚ್ ನ್ಯೂಸ್’, ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ ಸೇರಿದಂತೆ ಹಲವು ಹೆಸರಿನಲ್ಲಿ ಹೊಸ X ಖಾತೆಗಳು ಆರಂಭವಾಗಿವೆ. ಈ ಖಾತೆಗಳಲ್ಲಿ ಮೀಮ್ಗಳು, ವ್ಯಂಗ್ಯ ಪೋಸ್ಟ್ಗಳು ಮತ್ತು ರಾಜಕೀಯ ಟೀಕೆಗಳ ಮೂಲಕ ನಿರುದ್ಯೋಗ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಯುವಕರ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಶುರುವಾದ ಈ ಡಿಜಿಟಲ್ ಚಳವಳಿ ಇದೀಗ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.




Recent Comments