ರಾಯಚೂರು: ಅಗ್ನಿವೀರ್ ನೇಮಕಾತಿ–2027 ರ್ಯಾಲಿಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಈಗಾಗಲೇ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ತಿಳಿಸಿದೆ.
ನೋಂದಾಯಿತ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಮರ್ಪಕ ತಯಾರಿ ನಡೆಸಲು ನೆರವಾಗುವ ಉದ್ದೇಶದಿಂದ ಮೇ 25ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಒಂದು ದಿನದ ವಿಶೇಷ ಮಾರ್ಗದರ್ಶನ ಹಾಗೂ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರಾಥಮಿಕ ಮಾರ್ಗದರ್ಶನ ನೀಡಲಿದ್ದಾರೆ. ಜೊತೆಗೆ ಅಗ್ನಿವೀರ್ ನೇಮಕಾತಿ ವಿಧಾನ, ಪರೀಕ್ಷೆಯ ಮಾದರಿ, ಅಧ್ಯಯನ ತಂತ್ರಗಳು, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗೆ ಬೇಕಾದ ತಯಾರಿಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳಲಾಗುತ್ತದೆ.
ಹಿರಿಯ ಸೇನಾಧಿಕಾರಿಗಳು, ಮಾಜಿ ಸೈನಿಕರು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಭಾಗವಹಿಸಿ ಯುವಕರಿಗೆ ಉಪಯುಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಹೀಗಾಗಿ ನೋಂದಾಯಿತ ಅಭ್ಯರ್ಥಿಗಳು ಹಾಗೂ ಸೇನೆ ಸೇರುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಚೆನ್ನಾರೆಡ್ಡಿ ಮನವಿ ಮಾಡಿದ್ದಾರೆ.




Recent Comments