ರಾಯಚೂರು: “ಎರಡು-ಅರೆ ವರ್ಷ ಕಳೆದಿದೆ. ಎಲ್ಲಾ ಶಾಸಕರಿಗೂ ಮಂತ್ರಿಯಾಗಬೇಕೆಂಬ ಆಸೆ ಇರುತ್ತದೆ. ಈ ಭಾಗದ ಶಾಸಕ ದದ್ದಲ್ ಸೇರಿದಂತೆ ಎಲ್ಲರೂ ಅರ್ಹರು,” ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಅಭಿಪ್ರಾಯಪಟ್ಟರು.
ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಅವರು, ಖಾಸಗಿ ಕಲ್ಯಾಣ ಮಂಟಪದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವುಳ್ಳ ಎರಡು ಅಂಬುಲೆನ್ಸ್‌ಗಳನ್ನು ಉದ್ಘಾಟಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ವೀಕ್ ಆಗಿದ್ದಾರೆ ಎನ್ನುವ ವಿಪಕ್ಷ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಸಿಎಂ ವೀಕ್ ಆಗಿದ್ದಾರೆ ಅಂತ ಯಾರು ಹೇಳ್ತಾರೆ? ಸಿಎಂ ಆಡಳಿತ ಚೆನ್ನಾಗಿ ಕೊಡ್ತಿದ್ದಾರೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಹೀಗಾಗಿ ಸಿಎಂ ಯಾವುದೇ ಕಾರಣಕ್ಕೂ ನಿಶಕ್ತರಾಗಿಲ್ಲ,” ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ವಿಪಕ್ಷ ನಾಯಕರ ಹೇಳಿಕೆಗಳನ್ನು ಖಂಡಿಸಿದ ಅವರು, “ನಮ್ಮ ಪಕ್ಷದ ವಿಚಾರ ಅವರಿಗೆ ಗೊತ್ತಿರಲ್ಲ. ವರಿಷ್ಠರ ಮಾಹಿತಿ ಆಧಾರದಲ್ಲಿ ನಿರ್ಧಾರಗಳು ತೆಗೆದುಕೊಳ್ಳಲಾಗುತ್ತವೆ. ಗೊತ್ತಿಲ್ಲದೇ ಬಿಜೆಪಿ ನಾಯಕರು ಹೇಳಿಕೆ ಕೊಡಬಾರದು,” ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರ ದೆಹಲಿ ಭೇಟಿ ವಿಚಾರವಾಗಿ, “ಪ್ರತಿಯೊಂದು ಪಕ್ಷದಲ್ಲೂ ಹೈಕಮಾಂಡ್ ಭೇಟಿ ಸಾಮಾನ್ಯ. ಹಿಂದಿನ ಸರ್ಕಾರಗಳಲ್ಲಿಯೂ ಇದು ನಡೆಯುತ್ತಿತ್ತು. ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ,” ಎಂದರು.
ಉಪಚುನಾವಣೆ ಬಳಿಕ ರಾಜಕೀಯ ಬದಲಾವಣೆ ವಿಚಾರಕ್ಕೆ, “ಯಾರು ಹೇಳಿದ್ದಾರೆ ಗೊತ್ತಿಲ್ಲ. ಅವರನ್ನೇ ಕೇಳಿ,” ಎಂದು ಪ್ರತಿಕ್ರಿಯಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ, “ಈ ಬಗ್ಗೆ ಸಿಎಂ ಈಗಾಗಲೇ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಹೆಚ್ಚಿನ ವ್ಯಾಖ್ಯಾನ ಸಾಧ್ಯವಿಲ್ಲ,” ಎಂದರು.
ಕುರುಬ ಸಮುದಾಯದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಬೇಡಿಕೆ ಬಗ್ಗೆ, “ಸಂಖ್ಯೆ ಇರುವ ಕಡೆ ಪ್ರಾತಿನಿಧ್ಯ ಕೊಡಬೇಕು. ಈ ವಿಚಾರವನ್ನು ಸಿಎಂ ಗಮನಕ್ಕೆ ತರುತ್ತೇನೆ,” ಎಂದು ಹೇಳಿದರು.




Recent Comments