ಮಂತ್ರಾಲಯದ ಬಳಿ ಹೃದಯವಿದ್ರಾವಕ ಘಟನೆ; ಓರ್ವ ಮೃತದೇಹ ಪತ್ತೆ, ನಾಲ್ವರಿಗೆ ಶೋಧ ಕಾರ್ಯ ಮುಂದುವರಿಕೆ
ರಾಯಚೂರು: ಆಂಧ್ರಪ್ರದೇಶದ ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಹೈದ್ರಾಬಾದ್ ಮೂಲದ 5 ವರ್ಷದ ಯುವನ ಚಂದ್ರ, 35 ವರ್ಷದ ಸತೀಶ್, ಮಂತ್ರಾಲಯ ಗ್ರಾಮದ 25 ವರ್ಷದ ರಾಘವೇಂದ್ರ, 23 ವರ್ಷದ ಧನುಷ್ ಹಾಗೂ ಉರವಕೊಂಡದ 22 ವರ್ಷದ ಸಂಧ್ಯಾ ನೀರುಪಾಲಾದವರು. ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪೂಜೆ ಮುಗಿದ ಬಳಿಕ ತುಂಗಭದ್ರಾ ನದಿಗೆ ಈಜಲು ತೆರಳಿದ್ದ ಅವರು, ನದಿಯ ನೀರಿನ ಆಳದ ಬಗ್ಗೆ ಅರಿವಿಲ್ಲದೇ ನೀರಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಐವರು ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಅಪರ್ಣಾ ಎಂಬ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಶೋಧ ಕಾರ್ಯದ ವೇಳೆ ಧನುಷ್ ಅವರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರೆದಿದೆ. ಎಮ್ಮಿಗನೂರು ಉಪವಿಭಾಗದ ಪೊಲೀಸ್ ಅಧಿಕಾರಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ, ನೀರುಪಾಲಾದವರ ಹುಡುಕಾಟದ ಸಂದರ್ಭದಲ್ಲಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವವೂ ಪತ್ತೆಯಾಗಿದೆ. ಈ ಸಂಬಂಧ ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




Recent Comments