ಬಿಜನಗೇರಾ ಗ್ರಾಮದಲ್ಲಿ ದುರ್ಘಟನೆ; ರಸ್ತೆ ಅಗಲೀಕರಣಕ್ಕೆ ಗ್ರಾಮಸ್ಥರ ಒತ್ತಾಯ
ರಾಯಚೂರು: ತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಈರಣ್ಣ ಗೌಡ (25) ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಮಡಿಕೆ ಹೊಡೆದು ಮನೆಗೆ ಮರಳುತ್ತಿದ್ದ ವೇಳೆ ಕೆರೆ ಕಟ್ಟೆ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೆಗ್ಗು ಪ್ರದೇಶಕ್ಕೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಸುಮಾರು 25 ಅಡಿ ಆಳಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಮೈಮೇಲೆ ಬಿದ್ದ ಈರಣ್ಣ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಘಟನೆ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದೇ ವೇಳೆ, ಕೆರೆ ಕಟ್ಟೆ ಬಳಿಯ ರಸ್ತೆ ಅತ್ಯಂತ ಕಿರಿದಾಗಿರುವ ಕಾರಣ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅನಾಹುತಗಳನ್ನು ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.




Recent Comments