Friday, June 5, 2026
Google search engine
HomeBlogಪರಮೇಶ್ವರ್ ಅಥವಾ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ಒತ್ತಾಯ

ಪರಮೇಶ್ವರ್ ಅಥವಾ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲು ಒತ್ತಾಯ

ರಾಯಚೂರು: ಸಚಿವ ಸಂಪುಟದಲ್ಲಿ ಬಲಗೈ ಸಮುದಾಯದ ನಾಯಕರಾದ ಜಿ. ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆ ಅವರಲ್ಲಿ ಒಬ್ಬರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಇ. ಕುಮಾರ ಒತ್ತಾಯಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಲಗೈ ಸಮುದಾಯಕ್ಕೆ ಸ್ಥಳೀಯ ಹಾಗೂ ರಾಜ್ಯ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಸಮುದಾಯದ ಮತಗಳನ್ನು ಪಡೆಯುವಲ್ಲಿ ಆಸಕ್ತಿ ತೋರುವ ರಾಜಕೀಯ ಪಕ್ಷಗಳು, ಅಧಿಕಾರ ಮತ್ತು ಹುದ್ದೆಗಳ ಹಂಚಿಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಿದರು.

ಜಿ. ಪರಮೇಶ್ವರ್ ಅವರು ದೀರ್ಘ ರಾಜಕೀಯ ಅನುಭವ ಹೊಂದಿದ್ದು, ಹಲವು ಬಾರಿ ಶಾಸಕ, ಸಚಿವ, ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ನಾಯಕರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಸೂಕ್ತ ಎಂದು ಹೇಳಿದರು.

ಯುವ ನಾಯಕರಿಗೆ ಅವಕಾಶ ನೀಡುವ ಉದ್ದೇಶವಿದ್ದರೆ ಪ್ರಿಯಾಂಕ್ ಖರ್ಗೆ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು. ಅವರು ಸಚಿವರಾಗಿ ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ವಿಧಾನಸಭೆಯಲ್ಲಿಯೂ ಪರಿಣಾಮಕಾರಿ ನಾಯಕತ್ವ ತೋರಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅದೇ ರೀತಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಬಲಗೈ ಸಮುದಾಯದ ಮುಖಂಡರಿಗೆ ರಾಜ್ಯ, ಜಿಲ್ಲಾ ಹಾಗೂ ಕ್ಷೇತ್ರ ಮಟ್ಟದ ಸಮಿತಿಗಳಲ್ಲಿ ಸಮರ್ಪಕ ಸ್ಥಾನಮಾನ ನೀಡಲಾಗಿಲ್ಲ. ಅಲ್ಲದೆ, ನಿಗಮ-ಮಂಡಳಿಗಳ ನೇಮಕಾತಿಗಳಲ್ಲಿಯೂ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಲಗೈ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಪ್ರತಿ ಕ್ಷೇತ್ರದಲ್ಲೂ 15 ಸಾವಿರದಿಂದ 20 ಸಾವಿರ ಮತದಾರರಿದ್ದಾರೆ. ಸಮುದಾಯಕ್ಕೆ ರಾಜಕೀಯವಾಗಿ ನ್ಯಾಯ ದೊರೆಯದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೇರೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮುದಾಯದ ಮಹತ್ವದ ಪಾತ್ರವನ್ನು ರಾಜಕೀಯ ಪಕ್ಷಗಳ ನಾಯಕರು ಹಾಗೂ ವರಿಷ್ಠರು ಮರೆಯಬಾರದು. ಸಮುದಾಯದ ಮುಖಂಡರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸೂಕ್ತ ಅವಕಾಶಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular

Recent Comments