Friday, June 5, 2026
Google search engine
Homeರಾಯಚೂರುಮಾಸಿಕ ₹36 ಸಾವಿರ ಕನಿಷ್ಠ ವೇತನಕ್ಕೆ ಸಿಐಟಿಯು ಆಗ್ರಹ

ಮಾಸಿಕ ₹36 ಸಾವಿರ ಕನಿಷ್ಠ ವೇತನಕ್ಕೆ ಸಿಐಟಿಯು ಆಗ್ರಹ


ಕಾರ್ಮಿಕರ ಪರ ತಿದ್ದುಪಡಿಗಳೊಂದಿಗೆ ಕಾರ್ಮಿಕ ಸಂಹಿತೆ ಜಾರಿಗೆ ಒತ್ತಾಯ


ರಾಯಚೂರು: ಮಾಸಿಕ ₹36 ಸಾವಿರ ಕನಿಷ್ಠ ವೇತನ ನಿಗದಿ, ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕ ತಿದ್ದುಪಡಿಗಳನ್ನು ತರಬೇಕು ಹಾಗೂ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚ ಹಾಗೂ ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ನ ರೆಪ್ತಕೋಸ್ ಬ್ರೆಟ್ ಆಂಡ್ ಕಂ ಪ್ರಕರಣದಲ್ಲಿ ನಿಗದಿಪಡಿಸಿರುವ ಮಾನದಂಡಗಳ ಆಧಾರದ ಮೇಲೆ ರಾಜ್ಯದಲ್ಲಿ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಇತ್ತೀಚೆಗೆ ಹೆಚ್ಚಳ ಮಾಡಿರುವ ಕನಿಷ್ಠ ವೇತನವು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾನದಂಡಗಳಿಗೆ ಪೂರಕವಾಗಿಲ್ಲ. ಇಂದಿನ ಜೀವನ ವೆಚ್ಚ ಹಾಗೂ ಬೆಲೆ ಏರಿಕೆಗೆ ಅನುಗುಣವಾಗಿ ಮಾಸಿಕ ₹36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು 2025ರ ಏಪ್ರಿಲ್ 11ರಂದು ಹೊರಡಿಸಿದ್ದರೂ, ಅದನ್ನು ಪೂರ್ವಾನ್ವಯವಾಗಿ ಜಾರಿಗೆ ತರದೆ 2026ರ ಮೇ 22ರಂದು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಜಾರಿಗೆ ತಂದಿರುವುದರಿಂದ ಕಾರ್ಮಿಕರಿಗೆ ಒಂದು ವರ್ಷದ ವೇತನ ಬಾಕಿ (ಅರಿಯರ್ಸ್) ದೊರೆಯದಂತಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಕನಿಷ್ಠ ವೇತನವನ್ನು 2025ರ ಏಪ್ರಿಲ್‌ನಿಂದಲೇ ಜಾರಿಗೆ ಬರುವಂತೆ ತಿದ್ದುಪಡಿ ಮಾಡಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತರಬಾರದು. ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿಕೊಂಡು ಕರ್ನಾಟಕ ಸರ್ಕಾರವು ಕಾರ್ಮಿಕರ ಹಿತಾಸಕ್ತಿಗೆ ಅನುಗುಣವಾಗಿ ತಿದ್ದುಪಡಿಗಳನ್ನು ತಂದು ನಂತರ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಹೆಚ್. ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಪದಾಧಿಕಾರಿಗಳಾದ ಶಬ್ಬೀರ್, ಪ್ರವೀಣರೆಡ್ಡಿ ಗುಂಜಳ್ಳಿ, ಗಿರಿಯಪ್ಪ ಪೂಜಾರಿ, ವರಲಕ್ಷ್ಮಿ, ಮಲ್ಲಿಕಾರ್ಜುನ ಮನ್ಸಲಾಪೂರು, ಗುರುರಾಜ ದೇಸಾಯಿ, ರಮಾದೇವಿ, ರುದ್ರಪ್ಪ ನಾಯಕ, ಮರಿಯಮ್ಮ, ಮಹ್ಮದ್ ಹನೀಫ್, ಅಲ್ಲಾಭಕ್ಷ, ಮಹ್ಮದ್ ಮಾನ್ವಿ, ಕೆ.ಜಿ. ವೀರೇಶ್ ಸೇರಿದಂತೆ ಹಲವಾರು ಕಾರ್ಮಿಕರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments