ರಾಯಚೂರು,ಜೂ.೨೦-ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಎಡವಟ್ಟಿನಿಂದ ಹೊಸ ಕೃಷಿ ಪದವೀಧರರು ಉದ್ಯೋವೂ ಇಲ್ಲ,ಪದವಿಯಲಯೂ ಇಲ್ಲದ ಸ್ಥಿತಿ ಎದುರಿಸುವಂತಾಗಿದೆ.ರಾಜ್ಯ ಸರ್ಕಾರದ 976 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಇಂದು ಅರ್ಜಿ ಸಲ್ಲಿಕೆಯ ಕೊನೆಯ ದಿನವಾಗಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ನೂತನ ಕೃಷಿ ಪದವೀಧರರು ಅರ್ಜಿ ಸಲ್ಲಿಸಲು ಅನರ್ಹರಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ರಾಜ್ಯದ ಇತರ ಕೃಷಿ ವಿಶ್ವವಿದ್ಯಾಲಯಗಳು ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಿರುವಾಗ, ರಾಯಚೂರು ಕೃಷಿ ವಿವಿಯಲ್ಲಿ ಶೈಕ್ಷಣಿಕ ಅವಧಿ ಜುಲೈ 11ಕ್ಕೆ ಮಾತ್ರ ಪೂರ್ಣಗೊಳ್ಳಲಿದೆ. ಪರಿಣಾಮವಾಗಿ ಸುಮಾರು 465 ವಿದ್ಯಾರ್ಥಿಗಳು ಉದ್ಯೋಗಾವಕಾಶದಿಂದ ವಂಚಿತರಾಗುವ ಸ್ಥಿತಿ ಎದುರಾಗಿದೆ.ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರ ಹಾಗೂ ಕೆಇಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡುವಂತೆ ಆಗ್ರಹಿಸಿದ್ದಾರೆ. ಶೈಕ್ಷಣಿಕ ವಿಳಂಬವೇ ಉದ್ಯೋಗಕ್ಕೆ ಅಡ್ಡಿ!ರಾಜ್ಯದಲ್ಲಿ 9 ವರ್ಷಗಳ ಬಳಿಕ ಕೃಷಿ ಇಲಾಖೆ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಬಿದ್ದಿದ್ದರೂ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಇದು ನಿರಾಶೆಯ ಸುದ್ದಿಯಾಗಿದೆ.ಬಿಎಸ್ಸಿ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 105 ಶೈಕ್ಷಣಿಕ ದಿನಗಳು ಪೂರ್ಣಗೊಂಡ ನಂತರ ಮಾತ್ರ ಗ್ರೇಡ್ ಹಾಗೂ ಪದವಿ ನೀಡಲಾಗುತ್ತದೆ. ರಾಜ್ಯದ ಇತರ ಕೃಷಿ ವಿವಿಗಳು ಈ ಪ್ರಕ್ರಿಯೆಯನ್ನು ಜೂನ್ 10ರೊಳಗೆ ಪೂರ್ಣಗೊಳಿಸಿದ್ದರೆ, ರಾಯಚೂರು ವಿವಿ ಜುಲೈ 11ಕ್ಕೆ ಮಾತ್ರ ಪೂರ್ಣಗೊಳಿಸುತ್ತಿದೆ.ಈ ಹಿನ್ನೆಲೆದಲ್ಲಿ ಕಲ್ಯಾಣ ಕರ್ನಾಟಕದ 6 ಕೃಷಿ ಕಾಲೇಜುಗಳ 465 ವಿದ್ಯಾರ್ಥಿಗಳು ಕೆಇಎ ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.ವಿದ್ಯಾರ್ಥಿಗಳು ಅರ್ಜಿ ದಿನಾಂಕವನ್ನು ಕನಿಷ್ಠ ಮೂರು ವಾರಗಳ ಮಟ್ಟಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೃಷಿ ಸಚಿವರೇ ಇಲ್ಲದೇ ಇರುವಾಗ ಸಮಸ್ಯೆ ಯಾಗಿದೆ. ಸರಕಾರ ಕೂಡಲೇ ಸ್ಪಂದಿಸಿ ಉದ್ಯೋಗಕ್ಕೆ ಅವಕಾಶ ಒದಗಿಸಬೇಕೆಂಬದು ಒತ್ತಾಯವಾಗಿದೆ





Recent Comments