Saturday, September 12, 2026
Google search engine
Homeರಾಜ್ಯಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ 148 ಕೋಟಿ ಅನುದಾನ: ಪಲ್ಲವಿ.ಜಿ

ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ 148 ಕೋಟಿ ಅನುದಾನ: ಪಲ್ಲವಿ.ಜಿ

ರಾಯಚೂರು: ರಾಜ್ಯದ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ಎಸ್‌ಎಪಿ ಅಡಿಯಲ್ಲಿ 100 ಕೋಟಿ ರೂ ಹಾಗೂ ಟಿಎಸ್‌ಪಿ ಅಡಿಯಲ್ಲಿ 48 ಕೋಟಿ ರೂ ಅನುದಾನವನ್ನು ಸರ್ಕಾರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ನೀಡಿದೆ ಎಂದು ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ತಿಳಿಸಿದರು.ನಗರದ ಕನ್ನಡ ಭವನದಲ್ಲಿ ಶುಕ್ರವಾರ ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ , ಅಲೆಮಾರಿ ಸಮುದಾಯಗಳ ಮೂಲ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ನಿಟ್ಟಿನಲ್ಲಿ ನಿಗಮದಿಂದ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಸಮುದಾಯದ ಬಹುತೇಕ ಕುಟುಂಬಗಳಿಗೆ ಮೂಲ ದಾಖಲಾತಿಗಳ ಕೊರತೆ, ಶಾಶ್ವತ ನೆಲೆ ಇಲ್ಲದಿರುವುದು, ಶಿಕ್ಷಣದಿಂದ ವಂಚಿತರಾಗಿರುವುದು ಹಾಗೂ ಸರ್ಕಾರದ ಸೌಲಭ್ಯಗಳ ಕುರಿತು ಅರಿವಿನ ಕೊರತೆ ಪ್ರಮುಖ ಸಮಸ್ಯೆಗಳಾಗಿವೆ. ಹೀಗಾಗಿ ಮೊದಲು ಅವರಿಗೆ ಶಾಶ್ವತ ನೆಲೆ ಕಲ್ಪಿಸಿ, ಅಗತ್ಯ ಮೂಲ ದಾಖಲಾತಿಗಳನ್ನು ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ತಾಲೂಕುವಾರು ಪ್ರವಾಸ ಕೈಗೊಂಡು ನಿಗಮದ ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಲೆಮಾರಿಗಳು ಡೇರೆ, ಜೋಪಡಿ ಹಾಗೂ ಗುಡಿಸಲುಗಳಲ್ಲಿ ವಾಸಿಸುವ ಸ್ಥಳಗಳಿಗೆ ತೆರಳಿ ಅಲ್ಲಿಯೇ ಆಧಾರ್ ಕಾರ್ಡ್ ಒದಗಿಸುವಂತೆ ಸರ್ಕಾರದಿಂದ ಆದೇಶ ಮಾಡಿಸಲಾಗಿದೆ. ಆಧಾರ್ ನಂತರ ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದರು.ಬಹುತೇಕ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯದವರಿಗೆ ನಿವೇಶನ ಹಾಗೂ ಭೂಮಿ ಕಲ್ಪಿಸುವ ಕಾರ್ಯ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ 24 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ನಿಗದಿಪಡಿಸಲಾಗಿದೆ. ಅಲೆಮಾರಿ ಸಮುದಾಯದವರು ವಾಸಿಸುವ ಕಾಲೋನಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಕೆಲಸವನ್ನೂ ನಿಗಮದಿಂದ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಅಲೆಮಾರಿ ಸಮುದಾಯದ ಮಕ್ಕಳು ಶಿಕ್ಷಣದ ಮೂಲಕವೇ ಮುಖ್ಯವಾಹಿನಿಗೆ ಬರಲು ಸಾಧ್ಯ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಶೇ.10ರಷ್ಟು ಪ್ರವೇಶವನ್ನು ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆದು ಕ್ರಮ ಕೈಗೊಳ್ಳಲಾಗಿದೆ ಎಂದು ಪಲ್ಲವಿ ಹೇಳಿದರು.ಯುವಜನರಿಗೆ ಅವರ ವೃತ್ತಿ ಹಾಗೂ ಕೌಶಲ್ಯ ಆಧಾರಿತ ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶವೂ ನಿಗಮಕ್ಕಿದೆ ಎಂದರು.ರಾಯಚೂರಿನ ಕಾಲೋನಿಗಳ ಅಭಿವೃದ್ಧಿಗೆ ಕ್ರಮರಾಯಚೂರು ಜಿಲ್ಲೆಗೆ ತಮ್ಮ ಎರಡನೇ ಜಿಲ್ಲೆ ಪ್ರವಾಸ ಕೈಗೊಂಡು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಲೆಮಾರಿ ಸಮುದಾಯದವರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಸಿಂಧನೂರು ನಗರದ ವಾರ್ಡ್ ನಂ.27ರ ಹಿರೇಲಿಂಗೇಶ್ವರ ಕಾಲೋನಿಯಿಂದ ವಾರ್ಡ್ ನಂ.9ರ ಪಿರ್ಸಾಬ್ ಅವರ ಮನೆಯವರೆಗಿನ ಚರಂಡಿ ಹಾಗೂ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ 32.21 ಲಕ್ಷ ರೂ ಅನುದಾನ ಒದಗಿಸುವಂತೆ ಬೇಡಿಕೆ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ತರಿಸಿಕೊಂಡು ಕಾಮಗಾರಿ ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದು ಹೇಳಿದರು.ರಾಯಚೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯದ ಕಾಲೋನಿಗಳ ಅಭಿವೃದ್ಧಿಗೆ ನಿಗಮ ಬದ್ಧವಾಗಿದೆ ಎಂದರು.75 ಕೋಟಿ ರೂ ಮೊದಲ ಹಂತದಲ್ಲಿ ಬಿಡುಗಡೆ2025-26ನೇ ಸಾಲಿನ ಬಜೆಟ್‌ನಲ್ಲಿ ಅಲೆಮಾರಿ ಜನಾಂಗದ ಕಾಲೋನಿಗಳ ರೂ ಸಮಗ್ರ ಅಭಿವೃದ್ಧಿಗೆ 100 ಕೋಟಿ ಘೋಷಿಸಲಾಗಿದ್ದು, ಕೇವಲ ₹30 ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲ ಹಂತದಲ್ಲಿ ₹75 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಉಳಿದ ಅನುದಾನವೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.ಜಾತಿ ಪ್ರಮಾಣಪತ್ರ ಸಮಸ್ಯೆ ಪರಿಹಾರಕ್ಕೆ ಕ್ರಮಅಲೆಮಾರಿ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಹಲವು ಜಿಲ್ಲೆಗಳಲ್ಲಿ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಪೂರ್ವಜರ ಜಾತಿ ಪ್ರಮಾಣಪತ್ರ ಅಥವಾ ಶೈಕ್ಷಣಿಕ ದಾಖಲೆಗಳನ್ನು ಕೇಳುವುದರಿಂದ ಶಿಕ್ಷಣವಂಚಿತವಾಗಿದ್ದ ಅಲೆಮಾರಿ ಸಮುದಾಯದವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸ್ಥಳ ಪರಿಶೀಲನೆ, ಸಮುದಾಯದ ಆಚರಣೆ, ಮದುವೆ ಪದ್ಧತಿ, ಜೀವನಶೈಲಿ, ಆಹಾರ ಪದ್ಧತಿ, ವೃತ್ತಿ ಹಾಗೂ ಭಾಷೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಜಾತಿ ಪ್ರಮಾಣಪತ್ರ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು 13 ವರ್ಷಗಳಿಂದ ಚನ್ನದಾಸರ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ನೀಡದ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹರಿಸಲಾಗಿದೆ. ಇದೀಗ ಹಂತ ಹಂತವಾಗಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ ಎಂದರು.ಪರ್ಯಾಯ ಜಾತಿ ಹೆಸರುಗಳಿಂದ ಉಂಟಾಗುತ್ತಿರುವ ಗೊಂದಲ ನಿವಾರಣೆಗೆ ಶಾಶ್ವತ ಆಯೋಗ ಸ್ಥಾಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗ ಸ್ಥಾಪನೆಯಾದ ಬಳಿಕ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದರು.ಜನಗಣತಿಯಲ್ಲಿ ಅಲೆಮಾರಿಗಳ ಸಂಖ್ಯೆ ದಾಖಲಿಸುವಂತೆ ಮನವಿಅಲೆಮಾರಿ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಜನಗಣತಿಯಲ್ಲಿ ಅವರ ನಿಖರ ಜನಸಂಖ್ಯೆ ದಾಖಲಾಗುವುದು ಅತ್ಯಂತ ಮುಖ್ಯ. ಹೀಗಾಗಿ ಜನಗಣತಿ ಸಂದರ್ಭದಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ಸರಿಯಾಗಿ ದಾಖಲಾಗುವಂತೆ ಅಲೆಮಾರಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಾಧ್ಯಮದವರ ಮೂಲಕ ಮನವಿ ಮಾಡಿದರು.ಅಲೆಮಾರಿ ಸಮುದಾಯದವರು ವಾಸಿಸುವ ಕಾಲೋನಿಗಳಲ್ಲಿ ಪ್ರತಿ ತಿಂಗಳು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಬಂದರೂ ಅಧಿಕಾರಿಗಳು ಅದನ್ನು ಪರಿಹರಿಸಿ, ಕ್ರಮದ ವರದಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಾ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಶಿಮಾನಪ್ಪ, ಪ್ರಮುಖರಾದ ರಂಗಮುನಿದಾಸ, ಶ್ರೀನಿವಾಸ, ಅನಂತಕುಮಾರ, ಶಿವಾನಂದ ಭಜಂತ್ರಿ, ರವಿಕುಮಾರ, ಮಾಲಾ ಭಜಂತ್ರಿ, ರಾಮಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments