ರಾಯಚೂರು ಆಗಸ್ಟ್ 31 (ಕರ್ನಾಟಕ ವಾರ್ತೆ): ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಇತ್ತೀಚೆಗೆ ಮೃತ ಕು.ಅಶ್ವಿನಿ ಎಂಬುವವರನ್ನು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆಗೈದ ಮೃತಳ ಮನೆಗೆ ಆಗಸ್ಟ್ 31ರ ಸೋಮವಾರ ದಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲಾ ಉಸ್ತುವಾರಿ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಅವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವುದರ ಜೊತೆಗೆ ಅವರಿಗೆ ವೈಯಕ್ತಿಕ ಧನ ಸಹಾಯವನ್ನು ಮಾಡಿ ಕುಟುಂಬದವರಿಂದ ಮಾಹಿತಿ ಪಡೆದರು. ಮೃತ ಅಶ್ವಿನಿ ಸಹೋದರನಿಂದ ಮಾಹಿತಿ ಪಡೆದರು. ನಂತರ ಸಹೋದರಿ ಮಾತನಾಡಿ,ಗ್ರಾಮದಲ್ಲಿ ಮಹಿಳೆಯರಿಗೆ ಸರಿಯಾದ ಗೌರವವಿಲ್ಲ. ದೌರ್ಜನ್ಯಗಳು ಹೆಚ್ಚಾಗಿವೆ. ನಮ್ಮಂತವರಿಗೆ ಸೂಕ್ತ ಭದ್ರತೆ ಹಾಗೂ ಸ್ಥಾನಮಾನವನ್ನು ಒದಗಿಸಬೇಕು. ಅಲ್ಲದೆ ಗೌರವದಿಂದ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಸಚಿವರ ಮುಂದೆ ತಮ್ಮ ನೋವನ್ನು ಹೊರಹಾಕಿದರು.*ಪ್ರತಿಭಟನೆ ಸ್ಥಳಕ್ಕೆ ಸಚಿವರು ಭೇಟಿ:* ಕುಮಾರಿ ಅಶ್ವಿನಿ ತಮ್ಮಾರೆಡ್ಡಿ, ಭೂಮಾನಂದ, ರಾಣಿಮ್ಮ ಅತ್ಯಾಚಾರ- ಕಗ್ಗೊಲೆ ದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟ ರಾಯಚೂರು ವತಿಯಿಂದ ಹೊಕ್ರಾಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಸ್ಥಳಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲಾ ಉಸ್ತುವಾರಿ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಸೇರಿದಂತೆ ವಿವಿಧ ಗಣ್ಯರು ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.ಈ ವೇಳೆ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕ್ರೂರ ಹಾಗೂ ಅಮಾನವೀಯ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನೊಂದ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸ್ಥಳೀಯ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಘಟನೆ ನಡೆದ ಕೆಲವೇ ದಿನಗಳಲ್ಲಿ ಸರ್ಕಾರ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದೆ ಎಂದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಆರ್ಇ ಹಾಗೂ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯವಿರುವ ಹೆಚುವರಿ ಸಿಬ್ಬಂದಿಯನ್ನು ಭರ್ತಿ ಮಾಡುವ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.ಜಿಲ್ಲಾಡಳಿತದ ವತಿಯಿಂದ ತಕ್ಷಣದ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಮೃತ ಅಶ್ವಿನಿ ಅವರ ಕುಟುಂಬದವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಲಾಗಿದ್ದು, ಅವರ ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದರು.*ಮಹಿಳೆಯರ ಭದ್ರತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ:* ಎಸ್ಸಿ/ಎಸ್ಟಿ ಕಾಲೋನಿಗಳು ಹಾಗೂ ಪ್ರಮುಖ ಓಣಿಗಳಲ್ಲಿ ಮಹಿಳೆಯರ ಗೌರವ ಮತ್ತು ನೈರ್ಮಲ್ಯ ಕಾಪಾಡಲು ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಕಳೆದ ವರ್ಷ 25 ಕೋಟಿ ರೂ. ಅನುದಾನ ನಮ್ಮ ಭಾಗದ ಶೌಚಾಲಯಗಳಿಗಾಗಿ ಕಾಯ್ದಿರಿಸಲಾಗಿದ್ದು, ಈಗಾಗಲೇ ಕಾಮಗಾರಿಗಳು ಪ್ರಾರಂಭವಾಗಿವೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆಗೆ ಆಸ್ಪದ ನೀಡುವುದಿಲ್ಲ. ಸರ್ಕಾರ ಸಂಪೂರ್ಣವಾಗಿ ನೊಂದ ಕುಟುಂಬದ ಪರವಾಗಿದ್ದು, ಅಗತ್ಯವಿರುವ ಎಲ್ಲಾ ತನಿಖಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ಭೂಮಿ ಹಂಚಿಕೆ, ನೈರ್ಮಲ್ಯ ಹಾಗೂ ಶೌಚಾಲಯ ಸೌಕರ್ಯ ಸೇರಿದಂತೆ ಇನ್ನಿತರ ಅಗತ್ಯ ಪರಿಹಾರಗಳನ್ನು ಒದಗಿಸಲಾಗುತ್ತದೆ ಎಂದು ಸಚಿವರು ಹೇಳಿದರು. *ಸಿಐಡಿ / ಎಸ್ಐಟಿ ತನಿಖೆಗೆ ಮನವಿ:* ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕು ಎನ್ನುವ ಸಾರ್ವಜನಿಕರ ಹಾಗೂ ಕುಟುಂಬಸ್ಥರ ಬೇಡಿಕೆಯನ್ನು ಈಗಾಗಲೇ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳಿಗೆ ಈ ಕುರಿತು ಸಂಪೂರ್ಣ ವರದಿ ಹಾಗೂ ಮಾಹಿತಿಯನ್ನು ತಲುಪಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ, ಜಿಲ್ಲೆಯಲ್ಲಿ ನಡೆದಂತಹ ಈ ಘಟನೆಗಳು ನಾಗರಿಕರ ಸಮಾಜ ತಲೆ ತೆಳಗಾಗುವಂತೆ ಮಾಡಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲುನಿಯೋಗವನ್ನು ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲಾಗುತ್ತಿದೆ. ಒಟ್ಟಾರೆಯಾಗಿ ಯಾರಿಗೂ ಅನ್ಯಾಯವಾಗದಂತೆ ತನಿಖೆ ಮಾಡಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಆಗಬೇಕು. ಜಿಲ್ಲೆಯಲ್ಲಿ ಎಲ್ಲರೂ ಸಹೋದರತ್ವ ಆಗಿರಬೇಕು ಎಂದರು.ಇದೇ ಸಂದರ್ಭದಲ್ಲಿ ಸಂಸದರಾದ ಜಿ.ಕುಮಾರ ನಾಯಕ, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಸಿರವಾರ ತಹಶಿಲ್ದಾರ್ ಚಂದ್ರಶೇಖರ ಪವಾರ್, ವಿವಿಧ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹೊಕ್ರಾಣಿ ಗ್ರಾಮಸ್ಥರು ಉಪಸ್ಥಿತರಿದ್ದರು.





Recent Comments