ಮಂತ್ರಾಲಯ: ಗುರುವಾರದಿಂದ ಪ್ರಾರಂಭಗೊಂಡಿರುವ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯಿಂದ ಶೇಷವಸ್ತ್ರ ಸಮರ್ಪಿಸಲಾಯಿತು. ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಮುಡ್ಡಾಡ ರವಿಚಂದ್ರ ಅವರು ಇತರ ಟಿಟಿಡಿ ಅಧಿಕಾರಿಗಳೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ಶ್ರೀ ರಾಯರಿಗೆ ಪವಿತ್ರ ಶ್ರೀವಾರಿ ವಸ್ತ್ರ ಸಮರ್ಪಿಸಿದರು.ಮಠಕ್ಕೆ ಆಗಮಿಸಿದ ಟಿಟಿಡಿ ಅಧಿಕಾರಿಗಳನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಅಧಿಕಾರಿಗಳು ಮೆರೆವಣಿಗೆಯ ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಂಡರು. ಬಳಿಕ ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಮುಡ್ಡಾಡ ರವಿಚಂದ್ರ ಅವರು ಪವಿತ್ರ ಶ್ರೀವಾರಿ ವಸ್ತ್ರವನ್ನು ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರಿಗೆ ಸಮರ್ಪಿಸಿದರು.ಸ್ವಾಮೀಜಿಯವರು ಆ ಪವಿತ್ರ ಶ್ರೀವಾರಿ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಅರ್ಪಿಸಿದರು. ನಂತರ ಟಿಟಿಡಿ ಅಧಿಕಾರಿಗಳು ಸ್ವಾಮೀಜಿಯವರಿಗೆ ಟಿಟಿಡಿ ಪ್ರಸಾದ ಹಾಗೂ ಶೇಷವಸ್ತ್ರವನ್ನು ಸಮರ್ಪಿಸಿದರು.ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಮುಡ್ಡಾಡ ರವಿಚಂದ್ರ ಸೇರಿದಂತೆ ಇತರ ಅಧಿಕಾರಿಗಳಿಗೆ ಶೇಷವಸ್ತ್ರ, ಫಲಮಂತ್ರಾಕ್ಷತೆ ಹಾಗೂ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.





Recent Comments