Saturday, September 12, 2026
Google search engine
Homeರಾಜ್ಯತಪ್ಪಿತಸ್ಥರಿಗೆ ಕಠಿಣ ಶಿಕ್ಷೆ, ಸರ್ಕಾರ ಸದಾ ನಿಮ್ಮೊಂದಿಗಿದೆ: ಸಚಿವ ಡಾ.ಅಜಯ್ ಧರ್ಮಸಿಂಗ್

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ, ಸರ್ಕಾರ ಸದಾ ನಿಮ್ಮೊಂದಿಗಿದೆ: ಸಚಿವ ಡಾ.ಅಜಯ್ ಧರ್ಮಸಿಂಗ್

ರಾಯಚೂರು ಆಗಸ್ಟ್ 31- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಭೂಮಾನಂದ ಹದ್ದಿನಾಳ ಅವರನ್ನು ಇತ್ತೀಚೆಗೆ ಸುಂಕೇಶ್ವರಹಾಳ ಗ್ರಾಮದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ದಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಹದ್ದಿನಾಳ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ವೇಳೆ ಸಚಿವರು ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಈ ಅಹಿತಕರ ಕೃತ್ಯ ಮತ್ತು ಘಟನೆಯನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು‌ ಸುದೀರ್ಘ ಚರ್ಚೆ ನಡೆಸಿದ್ದೇವೆ. ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಕೂಡ ಉಪಸ್ಥಿತರಿದ್ದು, ಘಟನೆಯ ವಿವರಗಳನ್ನು ಕಲೆಹಾಕಲಾಗಿದೆ ಎಂದರು.*ಎಂಟು ಜನರ ಬಂಧನ:* ಘಟನೆ ನಡೆದ ತಕ್ಷಣವೇ ಸಕ್ರಿಯವಾಗಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದರು.*ನಿಷ್ಪಕ್ಷಪಾತ ತನಿಖೆ:* ಘಟನೆಯ ಹಿಂದೆ ಯಾರಿದ್ದಾರೆ, ಪ್ರಚೋದನೆ ನೀಡಿದವರು ಯಾರು ಮತ್ತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾರ ಕೈವಾಡವೇ ಇದ್ದರೂ ತನಿಖೆಯ ನಂತರ ಎಲ್ಲಾ ಸತ್ಯ ಬೆಳಕಿಗೆ ಬರಲಿದೆ. ನಮ್ಮ ಸರ್ಕಾರ ಸಂತ್ರಸ್ತರು ಮತ್ತು ಸಾರ್ವಜನಿಕರ ಜೊತೆಗಿದೆ. ಸ್ವತಃ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ರಾಯಚೂರಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವುದಾಗಿ ತಿಳಿಸಿ ಬಂದಿದ್ದೇವೆ. ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಿದೆ ಎಂದರು.ದೇವದುರ್ಗ ಶಾಸಕಿ ಕರಿಯಮ್ಮ ಜಿ.ನಾಯಕ ಮಾತನಾಡಿ, ಸಂತ್ರಸ್ತರ ತಾಯಿ ಮತ್ತು ನಮ್ಮ ತಾಯಂದಿರು   ಒಂದೇ ಊರಿನ ತವರು ಮನೆಯವರಾಗಿದ್ದು, ನಮಗೂ ಈ ಕುಟುಂಬಕ್ಕೂ ಹತ್ತಿರದ ಒಡನಾಟವಿದೆ. ನಿಮ್ಮ ಈ ಅಪಾರ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂದರು.ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಎಷ್ಟೇ ಪ್ರಭಾವಿಯಾಗಿದ್ದರೂ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲೇಬೇಕು.ಬೇರೆಡೆ ಇಂತಹ ಘಟನೆಗಳು ನಡೆದ ತಕ್ಷಣವೇ ಸರ್ಕಾರ ಸ್ಪಂದಿಸಿ ಪರಿಹಾರ ನೀಡುವಂತೆ, ನಮ್ಮ ಕ್ಷೇತ್ರದಲ್ಲಿ ಇತ್ತೀಚೆಗೆ ಮೃತಪಟ್ಟ ಪರಿಶಿಷ್ಟ ಜಾತಿ (SC) ಸಮುದಾಯದ ಯುವಕರ ಕುಟುಂಬಗಳಿಗೂ ಹಾಗೂ ಈ ಕುಟುಂಬಕ್ಕೂ ಸೂಕ್ತ ಪರಿಹಾರ ತಕ್ಷಣವೇ ಸಿಗಬೇಕು ಎಂದರು.ನಾನು ಶಬರಿಮಲೆಯಲ್ಲಿದ್ದರೂ ಹಾಗೂ ಬೆಂಗಳೂರಿನಲ್ಲಿದ್ದರೂ ವಿಷಯ ತಿಳಿದ ತಕ್ಷಣವೇ ದೇವಸ್ಥಾನದ ಪೂಜೆಯನ್ನೂ ಬದಿಗೊತ್ತಿ ಸ್ಥಳಕ್ಕೆ ಧಾವಿಸಿ ಬಂದಿದ್ದೇನೆ. ಕ್ಷೇತ್ರದ ಮಗಳಾಗಿ ನಿಮ್ಮೆಲ್ಲರ ಜೊತೆ ನಿಲ್ಲುವುದು ನನ್ನ ಕರ್ತವ್ಯ ಎಂದರು.ಈ ವೇಳೆ ದೇವದುರ್ಗ ಸಮಾಜ ಕಲ್ಯಾಣ ‌ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಅವರು ಮಾತನಾಡಿ, ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ವತಿಯಿಂದ ಒಟ್ಟು 8,25,000 ರೂ.ಪರಿಹಾರ ಧನ ನಿಗದಿಯಾಗಿದ್ದು, ಅದರಲ್ಲಿ ಮೊದಲ ಕಂತಿನ ಭಾಗವಾಗಿ 4,12,500ರೂ. ಪರಿಹಾರದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.‌ ಅಲ್ಲದೆನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾದ ತಕ್ಷಣವೇ ಬಾಕಿ ಇರುವ 4,12,500 ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.ಇತ್ತೀಚೆಗೆ ಸಂತ್ರಸ್ತರ ಮನೆಗೆ ಅಧಿಕಾರಿಗಳು ನಾಲ್ಕು ಬಾರಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ರೇಷನ್ ಸೇರಿದಂತೆ ಇತರೆ ಅಗತ್ಯ ನೆರವು ಒದಗಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಂಸದರಾದ ಜಿ.ಕುಮಾರ ‌ನಾಯಕ, ವಿಧಾನ ಪರಿಷತ್ ‌ಸದಸ್ಯರಾದ ಎನ್.ಎಸ್.ಭೋಸರಾಜು,ಮಾನ್ವಿ ಶಾಸಕ ಹಂಪಯ್ಯ ನಾಯಕ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ದೇವದುರ್ಗ ತಹಶಿಲ್ದಾರ್ ನಾಗಮ್ಮ ಕಟ್ಟಿಮನಿ, ದೇವದುರ್ಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಸೇರಿದಂತೆ ಭೂಮಾನಂದ ಕುಟುಂಬಸ್ಥರು. ಹದ್ದಿನಾಳ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಯ ಮುಖಂಡರು ಇದ್ದರು.

RELATED ARTICLES
- Advertisment -
Google search engine

Most Popular

Recent Comments