ರಾಯಚೂರು:ತಾಲ್ಲೂಕಿನ ಕೊರ್ತಕುಂದಾ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆ ಕಂ ಬ್ಯಾರೇಜ್ ಯೋಜನೆ ಕುರಿತು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಪ್ರತಿನಿಧಿಗಳ ನಡುವೆ ಸೋಮವಾರ ತೆಲಂಗಾಣ ಕಾರ್ಯಾಲಯದಲ್ಲಿ ಉನ್ನತ ಮಟ್ಟದ ಅಂತರರಾಜ್ಯ ಸಭೆ ನಡೆಯಿತು.
ತೆಲಂಗಾಣದ ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಭಾಗವಹಿಸಿದರು.
ಸಭೆಯಲ್ಲಿ ತೆಲಂಗಾಣದ ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ವಾಕಿಟಿ ಶ್ರೀಹರಿ, ಪ್ರವಾಸೋದ್ಯಮ ಸಚಿವ ಜುಪಳ್ಳಿ ಕೃಷ್ಣ ರಾವ್ ಹಾಗೂ ನಾಗರ್‌ಕುರ್ನೂಲ್ ಕ್ಷೇತ್ರದ ಸಂಸದ ಡಾ. ಮಲ್ಲು ರವಿ ಉಪಸ್ಥಿತರಿದ್ದರು.
ಕರ್ನಾಟಕದ ಪರವಾಗಿ ರಾಯಚೂರು-ಯಾದಗಿರಿ ಲೋಕಸಭಾ ಸದಸ್ಯ ಜಿ. ಕುಮಾರ್ ನಾಯಕ್ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಸಭೆಯಲ್ಲಿ ಭಾಗವಹಿಸಿದರು. ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳು ಸಹ ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ ಯೋಜನೆಯ ಲಾಭಗಳು, ನೀರಾವರಿ ಸೌಲಭ್ಯ, ಕುಡಿಯುವ ನೀರಿನ ಭದ್ರತೆ, ಸುಸ್ಥಿರ ಕೃಷಿ ಹಾಗೂ ಅಂತರ್ಜಲ ಮರುಭರ್ತಿಗೆ ಸಂಬAಧಿಸಿದ ಅಂಶಗಳ ಕುರಿತು ಚರ್ಚೆ ನಡೆಯಿತು. ಜೊತೆಗೆ ಯೋಜನೆಗೆ ಸಂಬAಧಿಸಿದ ಕೆಲವು ಆತಂಕಗಳ ಬಗ್ಗೆಯೂ ವಿವರವಾದ ಸಮಾಲೋಚನೆ ನಡೆಸಲಾಯಿತು.
ಯೋಜನೆ ಕುರಿತು ಇನ್ನಷ್ಟು ಸ್ಪಷ್ಟತೆ ಪಡೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಸಹ ಚರ್ಚೆಗಳನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು.




Recent Comments