ರಾಯಚೂರು: ಕಲ್ಯಾಣ ಕರ್ನಾಟಕ ಭಾಗ ನಿರಂತರ ನಿರ್ಲಕ್ಷ್ಯ ಮತ್ತು ಅನ್ಯಾಯಕ್ಕೆ ಒಳಗಾಗಿದ್ದು, ಹಿಂದುಳಿತ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಮೌನ ವಹಿಸಿರುವುದನ್ನು ಖಂಡಿಸಿ, ಗೋವಿಂದರಾವ್ ಸಮಿತಿ ಶಿಫಾರಸುಗಳ ಜಾರಿಗೆ ಸಾರ್ವಜನಿಕ ಒತ್ತಡ ಅಗತ್ಯವೆಂದು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಠಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಮೈಸೂರು ಭಾಗದ ಜನರು ಹೈದ್ರಾಬಾದ್ ಕರ್ನಾಟಕ ಭಾಗವನ್ನು ಸೇರಿಸಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯನ್ನು ಉಲ್ಲೇಖಿಸಿದರು. ಹಿಂದುಳಿದ ಪ್ರದೇಶವನ್ನು ಅಭಿವೃದ್ಧಿಪಡಿಸುವ ಬದಲು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಇಂದಿರಾ ಗಾಂಧಿ ಕಾಲದಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ರಾಯಚೂರು ಸೇರಿದ್ದು, ‘ಗ್ರೋತ್ ಸೆಂಟರ್ ಇನ್ ರಾಯಚೂರು’ ಎಂಬ ವರದಿ ಹೊರಬಂದಿದ್ದರೂ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿದರು. ಬಳಿಕ ಬಂದ ಮಾನವ ಅಭಿವೃದ್ಧಿ ವರದಿಯಲ್ಲಿಯೂ ರಾಯಚೂರು ಅತ್ಯಂತ ಹಿಂದುಳಿದ ಜಿಲ್ಲೆಯಾಗಿ ಗುರುತಿಸಲ್ಪಟ್ಟಿದೆ ಎಂದು ವಿವರಿಸಿದರು.
ಇದನ್ನೂ ಓದಿ:
ಕಲ್ಯಾಣ ಕರ್ನಾಟಕ ಹೆಸರಿನಡಿಯಲ್ಲಿ 371(ಜೆ) ಜಾರಿಯಾದ ಬಳಿಕವೂ ಸಮರ್ಪಕ ಅಭಿವೃದ್ಧಿ ಆಗಿಲ್ಲ. ಇತ್ತೀಚೆಗೆ ಎಂ. ಗೋವಿಂದರಾವ್ ಸಮಿತಿ ವರದಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಮಂಡನೆಯಾದರೂ, ಯಾವುದೇ ಪಕ್ಷ ಗಂಭೀರ ಚರ್ಚೆಗೆ ಮುಂದಾಗಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಒಟ್ಟು 240 ತಾಲೂಕುಗಳ ಪೈಕಿ 23 ತಾಲೂಕುಗಳು ಅತ್ಯಂತ ಹಿಂದುಳಿದವಾಗಿದ್ದು, ಅವುಗಳಲ್ಲಿ 20 ತಾಲೂಕುಗಳು ಕಲ್ಯಾಣ ಕರ್ನಾಟಕದಲ್ಲಿಯೇ ಇರುವುದಾಗಿ ವರದಿ ತಿಳಿಸಿದೆ. ಆದರೂ ಈ ಭಾಗದ ಜನಪ್ರತಿನಿಧಿಗಳು ಮೌನವಾಗಿರುವುದು ಅಸಹ್ಯಕರ ಎಂದರು.
ಖಾಲಿ ಇರುವ 30 ಸಾವಿರ ಶಿಕ್ಷಕರ ಹುದ್ದೆಗಳು, ವಿಶ್ವವಿದ್ಯಾಲಯಗಳ ದುಸ್ಥಿತಿ ಹಾಗೂ ಅಭಿವೃದ್ಧಿ ಮಂಡಳಿಯ ಅನುದಾನದ ಕುರಿತು ಬಹಿರಂಗ ಚರ್ಚೆ ಅಗತ್ಯವಿದೆ. ಗೋವಿಂದರಾವ್ ವರದಿಯ ಶಿಫಾರಸುಗಳ ಜಾರಿಗೆ ಜನರು ಮತ್ತು ಸಂಘಟನೆಗಳು ಒತ್ತಡ ಹೇರುವ ಅಗತ್ಯವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 19, 2026ರಂದು ನಗರದ ಎಪಿಎಂಸಿ ಸಭಾಂಗಣದಲ್ಲಿ ಪ್ರಾದೇಶಿಕ ಅಸಮಾನತೆ ಕುರಿತ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಶಿವರಾಜ್ ಪಾಟೀಲ್ ಮತ್ತು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ರಜಾಕ್ ಉಸ್ತಾದ್ ಮತ್ತು ತ್ರಿವಿಕ್ರಮ ಜೋಶಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ವಿವಿಧ ಗಣ್ಯರು ಸಂವಾದದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾಲಿಪಾಟೀಲ್, ಜಾನ್ ವೆಸ್ಲಿ, ಬಿ. ಬಸವರಾಜ, ಹರವಿ ನಾಗನಗೌಡ, ಶಾರದ ಹುಲಿನಾಯಕ ಸೇರಿ ಅನೇಕರಿದ್ದರು.




Recent Comments