ರಾಯಚೂರು: ಆಂಧ್ರ ಪ್ರದೇಶದ ಮಂತ್ರಾಲಯದ ಬಳಿಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಹಾರುಬೂದಿ ಸಾಗಿಸುತ್ತಿದ್ದ ಟ್ಯಾಂಕರ್ ಮತ್ತು ಪಿಕ್‌ಅಪ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ ಐದು ಮಹಿಳೆಯರು, ಇಬ್ಬರು ಪುರುಷರು (ಚಾಲಕ ಸೇರಿ) ಹಾಗೂ ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಗೋವಿಂದರಾವ್ ವರದಿ ಜಾರಿಗೆ ಒತ್ತಡ ಅಗತ್ಯ; ಜನಪ್ರತಿನಿಧಿಗಳ ಮೌನ ಖಂಡನೆ: ರಾಘವೇಂದ್ರ ಕುಷ್ಟಗಿ
ಮೃತರನ್ನು ಚಿಕ್ಕಮಗಳೂರು ಭಾಗದ ಕಣನಾಯಕನಹಳ್ಳಿಯ ಕುಮಾರ (50), ದೀಪಿಕಾ (40), ಬೆಳ್ಳಿ (5), ಬೇಲೂರು ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಸುನೀಲ್ (40), ಯಶೋದಾ (60), ಲೋಲಾಕ್ಷಿ, ಉದ್ದೇವ ಗ್ರಾಮದ ಪುಟ್ಟಮ್ಮ (55) ಹಾಗೂ ಮೀನಾಕ್ಷಿ ಎಂದು ಗುರುತಿಸಲಾಗಿದೆ.
ಸುಮಾರು 21 ಮಂದಿ ಭಕ್ತರು ಮಂತ್ರಾಲಯಕ್ಕೆ ರಾಯರ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಇನ್ನೂ 9 ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಕರುನೂಲ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




Recent Comments