Wednesday, April 15, 2026
Google search engine
Homeರಾಯಚೂರುರಾಯಚೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ: ಕರ್ತವ್ಯ ನಿಷ್ಠೆಯ ಪ್ರತೀಕವಾಗಿ ಆಚರಣೆ- ಬಸವರಾಜ

ರಾಯಚೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ: ಕರ್ತವ್ಯ ನಿಷ್ಠೆಯ ಪ್ರತೀಕವಾಗಿ ಆಚರಣೆ- ಬಸವರಾಜ

ರಾಯಚೂರು: ಪೊಲೀಸ್ ಇಲಾಖೆಯು ಗುರುವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಆರಕ್ಷಕ ಉಪ ನಿರೀಕ್ಷಕರಾದ ಬಸವರಾಜ ಮಾತನಾಡಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಕರ್ತವ್ಯ ಎಂದರು.

1965ರ ಏಪ್ರಿಲ್ 2ರಂದು ಕರ್ನಾಟಕದಲ್ಲಿ ಪೊಲೀಸ್ ಪಡೆ ಅಧಿಕೃತವಾಗಿ ರಚನೆಯಾದ ದಿನದ ನೆನಪಿಗಾಗಿ ಈ ದಿನವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ. ಪೊಲೀಸ್ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಹಾಗೂ ರಕ್ಷಣೆಯ ಸಂಕೇತವಾಗಿದೆ. ಈ ಧ್ವಜದ ಮೂಲಕ ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯವನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಪೊಲೀಸ್ ಧ್ವಜ ಟಿಕೆಟ್‌ಗಳನ್ನು ಮಾರಾಟ ಮಾಡಿ ಸಂಗ್ರಹವಾಗುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗುತ್ತದೆ. ನಾನು 1987ರ ಫೆಬ್ರುವರಿಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಪಿ.ಸಿ, ಎಚ್.ಸಿ, ಎ.ಎಸ್.ಐ ಮತ್ತು ಪಿ.ಎಸ್.ಐ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2025ರ ಫೆಬ್ರುವರಿ 28ರಂದು ಸಿಂಧನೂರು ನಗರ ಪೊಲೀಸ್ ಠಾಣೆಯಿಂದ ನಿವೃತ್ತಿ ಹೊಂದಿದ್ದೇನೆ ಎಂದರು.

ಪೊಲೀಸ್ ಕೆಲಸ ಸುಲಭವಲ್ಲ. ಬಿಸಿಲು, ಮಳೆ, ಗಾಳಿ ಎನ್ನದೇ ಎಲ್ಲಾ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಾರ್ವಜನಿಕರು ಹಬ್ಬ-ಹರಿದಿನ ಆಚರಿಸುವಾಗ ಪೊಲೀಸರು ತಮ್ಮ ಕುಟುಂಬದಿಂದ ದೂರವಿದ್ದು ಸಾರ್ವಜನಿಕರ ರಕ್ಷಣೆಗೆ ನಿಂತಿರುತ್ತಾರೆ. ಊಟ, ನಿದ್ದೆ ಸಹ ಸಮಯಕ್ಕೆ ಸಿಗದೇ ಇರುವ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ ಎಂದು ವಿವರಿಸಿದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಹಾಗೂ ನಿವೃತ್ತ ಪೊಲೀಸ್ ಕಲ್ಯಾಣ ದಿನವನ್ನು ಪ್ರತಿ ವರ್ಷ ಏಪ್ರಿಲ್ 2ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ ಎಂದರು.

2025-26ನೇ ಸಾಲಿನಲ್ಲಿ ಆರೋಗ್ಯ ಭಾಗ್ಯ ಯೋಜನೆಯಡಿ 227 ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಚಿಕಿತ್ಸೆ ಪಡೆದಿದ್ದಾರೆ. ನಿವೃತ್ತ ಪೊಲೀಸ್ ನಿಧಿಯಿಂದ 82 ಜನರಿಗೆ 9,13,812 ರೂ. ವೈದ್ಯಕೀಯ ನೆರವು ನೀಡಲಾಗಿದೆ. 15 ಜನರಿಗೆ ಶವ ಸಂಸ್ಕಾರಕ್ಕಾಗಿ 1,50,000 ರೂ. ನೆರವು ನೀಡಲಾಗಿದೆ ಎಂದರು.

ಇದನ್ನೂ ಓದಿ: ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ: ಏಪ್ರಿಲ್-ಮೇ ತಿಂಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

ಪೊಲೀಸ್ ಸಿಬ್ಬಂದಿಯವರ ಉಪಯೋಗಕ್ಕಾಗಿ ಕಲ್ಯಾಣ ಮಂಟಪ, ಗ್ರಂಥಾಲಯ, ಜಿಮ್ ಹಾಗೂ ಸಬ್ಸಿಡರಿ ಪೊಲೀಸ್ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ಭಾಗ್ಯ ಯೋಜನೆಯಡಿ ಅಧಿಕಾರಿ, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಸೇರಿ 955 ಜನರು ಚಿಕಿತ್ಸೆ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.

ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಧ್ವಜ ಮಾರಾಟದ ಮೂಲಕ ಸಂಗ್ರಹವಾಗುವ ನಿಧಿಯನ್ನು ಪೊಲೀಸ್ ಸಿಬ್ಬಂದಿ ಹಾಗೂ ನಿವೃತ್ತ ಅಧಿಕಾರಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ. ಎಲ್ಲರೂ ಸಹಾಯಧನ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಸ್ವಾಮಿ, ಜಿ. ಹರೀಶ್, ಡಿವೈಎಸ್ಪಿಗಳಾದ ಪ್ರಮಾನಂದ ಘೋರಕೆ, ದತ್ತಾತ್ರೇಯ ಕಾರ್ನಾಡ್, ಸಿಪಿಐಗಳು ಹಾಗೂ ಪಿಎಎಸ್‌ಐಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳಿಂದ ಪಥ ಸಂಚಲನ, ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜದ ಆಗಮನ, ಮುಖ್ಯ ಅತಿಥಿಗಳ ಸನ್ಮಾನ ನಡೆಯಿತು. ಯಂಕಪ್ಪ ಅವರ ನೇತೃತ್ವದಲ್ಲಿ ಸಂಗೀತ ವಾದ್ಯ ನಿರ್ವಹಣೆ ನಡೆಯಿತು. ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ನಿರೂಪಿಸಿದರು.

RELATED ARTICLES
- Advertisment -
Google search engine

Most Popular

Recent Comments