Wednesday, April 15, 2026
Google search engine
Homeರಾಯಚೂರುಸ್ಟಾರ್ಟ್‌ಅಪ್ ಚಳವಳಿಗೆ ಕಾರ್ಯಾಗಾರದ ಮೂಲಕ ವೇಗ: ಸಚಿವ ಬೋಸರಾಜು

ಸ್ಟಾರ್ಟ್‌ಅಪ್ ಚಳವಳಿಗೆ ಕಾರ್ಯಾಗಾರದ ಮೂಲಕ ವೇಗ: ಸಚಿವ ಬೋಸರಾಜು

ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸಹಕಾರ ನೀಡುತ್ತಿದ್ದು, ಆಸಕ್ತ ಉದ್ಯಮಿಗಳು ಮುಂದೆ ಬಂದು ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಕರೆ ನೀಡಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಭಾರತ ಸರ್ಕಾರದ ಉದ್ಯಮ ಮತ್ತು ಅಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ‘ತೇಜಸ್’ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: ರಾಯಚೂರಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ: ಕರ್ತವ್ಯ ನಿಷ್ಠೆಯ ಪ್ರತೀಕವಾಗಿ ಆಚರಣೆ- ಬಸವರಾಜ

ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಉತ್ತಮ ಅವಕಾಶಗಳಿವೆ. ಎರಡು ನದಿಗಳು, ವಿದ್ಯುತ್ ಉತ್ಪಾದನೆ, ಹತ್ತಿ ಹಾಗೂ ಭತ್ತದ ಲಭ್ಯತೆ, ಭಾರತ್ ಮಾಲಾ ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯಗಳಿವೆ. ಇಂತಹ ಅವಕಾಶಗಳಿದ್ದರೂ ಸ್ಥಳೀಯರು ಕೈಗಾರಿಕೆ ಸ್ಥಾಪನೆಗೆ ಮುಂದೆ ಬರದೇ ಇರುವುದನ್ನು ಉಲ್ಲೇಖಿಸಿ, ಸ್ಥಳೀಯ ಉದ್ಯಮಿಗಳು ಹೆಚ್ಚು ಸಕ್ರಿಯರಾಗಬೇಕು ಎಂದು ಸಲಹೆ ನೀಡಿದರು.
ದೇಶದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಈ ಕಾರ್ಯಾಗಾರ ನಡೆಯುತ್ತಿರುವುದು ವಿಶೇಷವಾಗಿದೆ. ತಾಲೂಕು ಮಟ್ಟದಲ್ಲೂ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಿ ಸಲಹೆ-ಸೂಚನೆಗಳನ್ನು ಸಂಗ್ರಹಿಸಬೇಕು. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶಗಳಿದ್ದು, ಸ್ಥಳೀಯವಾಗಿ ಕಚ್ಚಾ ವಸ್ತುಗಳು ಸುಲಭವಾಗಿ ಲಭ್ಯವಿರುವುದು ದೊಡ್ಡ ಶಕ್ತಿ ಎಂದು ಹೇಳಿದರು.
ಕರ್ನಾಟಕವು ತಲಾ ಆದಾಯದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ರಾಯಚೂರಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ರೈಲು ಸಂಪರ್ಕ ಯೋಜನೆಗಳೂ ಮುಂದುವರಿಯುತ್ತಿವೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ಸ್ಟಾರ್ಟ್‌ಅಪ್ ಎಂದರೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಇದೆ. ಆದರೆ ರಾಯಚೂರಿನಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತರಬೇತಿ ನೀಡಲು ದೆಹಲಿಯಿಂದ ವಿಶೇಷ ತಜ್ಞರ ತಂಡ ಆಗಮಿಸಿದ್ದು, ಅವರ ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸಿದರೆ ಯುವಕರು ಸ್ವಂತ ಉದ್ಯಮ ಆರಂಭಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ನೋಡಲ್ ಅಧಿಕಾರಿ ಮಹಮ್ಮದ್ ಯೂಸುಫ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಉದ್ಯಮಶೀಲತೆಯನ್ನು ತಳಮಟ್ಟಕ್ಕೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ. ಯುವಕರು, ಮಹಿಳೆಯರು ಮತ್ತು ಹೊಸ ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಬಲಿಷ್ಠ ಸ್ಟಾರ್ಟ್‌ಅಪ್ ಪರಿಸರ ನಿರ್ಮಾಣವೇ ಇದರ ಉದ್ದೇಶ ಎಂದು ಹೇಳಿದರು.
ಈ ಕಾರ್ಯಾಗಾರವು ಉದ್ಯಮಿಗಳು, ವಿದ್ಯಾರ್ಥಿಗಳು, ನವೋದ್ಯಮಿಗಳು ಹಾಗೂ ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ನೆಟ್‌ವರ್ಕಿಂಗ್‌ಗೆ ಅವಕಾಶ ಕಲ್ಪಿಸುತ್ತದೆ ಎಂದು ವಿವರಿಸಿದರು.
ಇದೇ ವೇಳೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಐಐಐಟಿ ನಿರ್ದೇಶಕ ಪ್ರೋ. ಹರೀಶ್ ಕುಮಾರ್ ಸರ್ದಾನಾ, ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಅಧ್ಯಕ್ಷ ವಿಷ್ಣುಕಾಂತ ಭುತಡ, ಡಾ. ರಮೇಶ್, ಸಾವಿತ್ರಿ ಪುರುಷೋತ್ತಮ, ಎಸ್. ಕಮಲ್ ಕುಮಾರ, ವಿ. ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸ್ಟಾರ್ಟ್‌ಅಪ್ ಇಂಡಿಯಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments