ರಾಯಚೂರು: ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ರಾಯಚೂರು, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ಇತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ “ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಮುಕ್ತ ದೇಶಕ್ಕಾಗಿ ಒಂದು ದಿಟ್ಟ ಹೆಜ್ಜೆ” ಎಂಬ ಧೇಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿರುವ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಅಭಿಯಾನಕ್ಕೆ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿಯವರು ಚಾಲನೆ ನೀಡಿದರು. ಈ ವೇಳೆ ಅವರು ಈ ಅಭಿಯಾನದ ಭಿತ್ತಿಚಿತ್ರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರೇರೇಪಿಸುವ ವಿವಿಧ ಜಾಗೃತಿ ಪೋಸ್ಟರ್ಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.ಪೋಸ್ಟರ್ ಬಿಡುಗಡೆಯ ನಂತರ, ರಾಯಚೂರು ನಗರದ ಪ್ರಮುಖ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಗಂಜ್ ಪ್ರದೇಶ ಮತ್ತು ಮಾರ್ಕೆಟ್ ರಸ್ತೆಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಇಲಾಖೆಯ ಪ್ರಚಾರ ವಾಹನದ ಮೂಲಕ ಧ್ವನಿವರ್ಧಕ ಬಳಸಿ ಬಾಲಕಾರ್ಮಿಕ ಪದ್ಧತಿಯ ಕಾನೂನು ಬಾಹಿರತೆ ಹಾಗೂ ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಲಾಯಿತು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಶರಣಬಸಪ್ಪ, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಹಾಗೂ ಇಲಾಖೆಯ ಪ್ರಮುಖ ಸಿಬ್ಬಂದಿಗಳಾದ ಅಂಬರೀಶ್, ಬಸವರಾಜ್, ವಿಜಯಕುಮಾರ್, ಇಲಿಯಾಸ್ ಮಿಯಾ, ರಜಿಯಾ ಬೇಗಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.





Recent Comments