ಸಿಂಧನೂರು: ರಾಜ್ಯದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಂಧನೂರು ಗ್ರಾಮೀಣ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು 5 ಕೆಜಿ 210 ಗ್ರಾಂ ಒಣ ಗಾಂಜಾವನ್ನು ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಪ್ತಿ ಮಾಡಲಾದ ಗಾಂಜಾದ ಮೌಲ್ಯ ₹5,12,900 ಎಂದು ಅಂದಾಜಿಸಲಾಗಿದೆ.
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗು ಗಿರಿ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಜೆ. ಕುಮಾರಸ್ವಾಮಿ ಹಾಗೂ ಹರೀಶ್ ಜಿ., ಸಿಂಧನೂರು ಡಿವೈಎಸ್‌ಪಿ ಚಂದ್ರಶೇಖರ ಜಿ. ಅವರ ಮಾರ್ಗದರ್ಶನದಲ್ಲಿ ಸಿಪಿಐ ವಿನಾಯಕ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು.
ಮೊದಲ ಕಾರ್ಯಾಚರಣೆಯಲ್ಲಿ ಆರ್‌ಎಚ್ ಕ್ಯಾಂಪ್ ನಿವಾಸಿಗಳಾದ ಹನುಮೇಶ ಸರ್ಕಾರ್ (43) ಹಾಗೂ ಸ್ವಾಗತ್ ಸರ್ಕಾರ್ (34) ಅವರನ್ನು ವಶಕ್ಕೆ ಪಡೆದು, ಅವರಿಂದ 3 ಕೆಜಿ 90 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ವಿಚಾರಣೆಯ ವೇಳೆ ಮಣಿಶಂಕರ್ ಸರ್ಕಾರ್ ಹಾಗೂ ಶಿವಕುಮಾರ್ ಮಂಡಲ್ ಜೊತೆಗೆ ಸೇರಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅದೇ ದಿನ ಸಂಜೆ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಮಣಿಶಂಕರ್ ಸರ್ಕಾರ್ (37) ಎಂಬಾತನನ್ನು ಬಂಧಿಸಿ, ಆತನಿಂದ 2 ಕೆಜಿ 120 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೂಡ ಹನುಮೇಶ ಸರ್ಕಾರ್, ಸ್ವಾಗತ್ ಸರ್ಕಾರ್ ಹಾಗೂ ಶಿವಕುಮಾರ್ ಮಂಡಲ್ ಜೊತೆಗೆ ಸೇರಿ ವಿವಿಧ ಪ್ರದೇಶಗಳಿಂದ ಗಾಂಜಾ ತಂದು ಕ್ಯಾಂಪ್ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಮಣಿಶಂಕರ್‌ನನ್ನು ಕೂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ವೇಳೆ: ಬಂಧಿತ ಮೂವರಿಂದ ಒಟ್ಟು 5 ಕೆಜಿ 210 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದ್ದು, ಹನುಮೇಶ ಸರ್ಕಾರ್, ಸ್ವಾಗತ್ ಸರ್ಕಾರ್, ಮಣಿಶಂಕರ್ ಸರ್ಕಾರ್ ಹಾಗೂ ಶಿವಕುಮಾರ್ ಮಂಡಲ್ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 245/2026 ಮತ್ತು 246/2026ರಡಿ ಪ್ರಕರಣಗಳನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ: ದೇವರೆಡ್ಡಿ, ಮಹೇಶ್, ಶಂಕರ ಕುಲಕರ್ಣಿ, ಅಫೀಜುಲ್ಲಾ, ತಿಪ್ಪಣ್ಣ, ಅಮರೇಗೌಡ ಹಾಗೂ ಅಯ್ಯಮ್ಮ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.




Recent Comments