ರಾಯಚೂರು: ಪರಿಶಿಷ್ಟ ಜಾತಿಗಳ 101 ಸಮುದಾಯಗಳಿಗೆ ಸಮಾನ ನ್ಯಾಯ ಹಾಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಳಮೀಸಲಾತಿ ಮತ್ತು ಜಾತಿ ವರ್ಗೀಕರಣಕ್ಕೆ ಸಂಬAಧಿಸಿದAತೆ ಕೈಗೊಂಡಿರುವ ನಿರ್ಧಾರಗಳನ್ನು ಮರುಪರಿಶೀಲಿಸಬೇಕು ಎಂದು ಕರ್ನಾಟಕ ಪ್ರದೇ ಬಂಜಾರ(ಲAಬಾಣಿ) ಸೇವಾ ಸಂಘದಿAದ ನಗರ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. 2025ರ ಆಗಸ್ಟ್ 19ರಂದು ಸಚಿವ ಸಂಪುಟವು 101 ಪರಿಶಿಷ್ಟ ಜಾತಿಗಳನ್ನು ಎ, ಬಿ ಮತ್ತು ಸಿ ಎಂಬ ಮೂರು ಗುಂಪುಗಳಾಗಿ ವಿಂಗಡಿಸಿ, ಶೇ.17ರ ಮೀಸಲಾತಿಯಲ್ಲಿ ಕ್ರಮವಾಗಿ ಶೇ.6, 6 ಮತ್ತು 5ರಷ್ಟು ಹಂಚಿಕೆ ಮಾಡಲು ನಿರ್ಧರಿಸಿತ್ತು. ಈ ನಿರ್ಧಾರವು ವಿವಿಧ ಸಮುದಾಯಗಳ ಸಾಮಾಜಿಕ ಹಿಂದುಳಿದಿರುವಿಕೆ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅಸಮರ್ಪಕ ಪ್ರಾತಿನಿಧ್ಯವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ. ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು 2025ರ ಆಗಸ್ಟ್ 1ರಂದು ವರದಿ ಸಲ್ಲಿಸಿ, 101 ಜಾತಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಿ ಶೇ.17ರ ಮೀಸಲಾತಿಯನ್ನು ಕ್ರಮವಾಗಿ ಶೇ.1, 6, 5, 4 ಮತ್ತು 1ರಂತೆ ಹಂಚಿಕೆ ಮಾಡಲು ಶಿಫಾರಸು ಮಾಡಿತ್ತು.ನಂತರ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, 2025ರ ನವೆಂಬರ್ 27ರಂದು ನ್ಯಾಯಾಲಯ ಆದೇಶ ನೀಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಬಿ ಮತ್ತು ಸಿ ಗುಂಪಿನ ಸಮುದಾಯಗಳ ಪ್ರತಿಭಟನೆ ಹಾಗೂ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರವು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ಉಪಕೋಟಾ ಹಂಚಿಕೆ ಕುರಿತು ಪರಿಶೀಲನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ 2026ರ ಫೆಬ್ರವರಿ 27ರಂದು ಸರ್ಕಾರ ಅಧಿಸೂಚನೆ ಹೊರಡಿಸಿ, 2022ರ ಡಿಸೆಂಬರ್ 28ಕ್ಕೂ ಮುನ್ನ ಜಾರಿಯಲ್ಲಿದ್ದ ಹಳೆಯ ಮಾನದಂಡಗಳ ಪ್ರಕಾರ ಒಳಮೀಸಲಾತಿ ಅನ್ವಯಿಸದೆ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸುವಂತೆ ಇಲಾಖೆಗೆ ನಿರ್ದೇಶಿಸಿತ್ತು. ಆದರೆ, 2026ರ ಏಪ್ರಿಲ್ 30ರಂದು ಸಚಿವ ಸಂಪುಟವು ಶೇ.15ರ ಮೀಸಲಾತಿಯಲ್ಲಿ ಎ, ಬಿ ಮತ್ತು ಸಿ ಗುಂಪುಗಳಿಗೆ ಕ್ರಮವಾಗಿ ಶೇ.5.25, 5.25 ಮತ್ತು 4.5ರಷ್ಟು ಹಂಚಿಕೆ ಮಾಡಲು ನಿರ್ಧರಿಸಿತು. ಈ ನಿರ್ಧಾರದಿಂದ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಪ್ರತಿನಿಧಿಗಳು ಆರೋಪಿಸಿದ್ದಾರೆ. ಅದರಂತೆ ಮೇ 8 ಮತ್ತು ಮೇ 13ರಂದು ಹೊರಡಿಸಲಾದ ರೋಸ್ಟರ್ ಪಾಯಿಂಟ್ ಅಧಿಸೂಚನೆಗಳಲ್ಲಿಯೂ ಕಡಿಮೆ ಸಂಖ್ಯೆಯ ಹುದ್ದೆಗಳ ಸಂದರ್ಭದಲ್ಲಿ ಎಲ್ಲ 101 ಜಾತಿಗಳಿಗೆ ಸಮಾನ ಅವಕಾಶ ದೊರೆಯದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಹೀಗಾಗಿ 2025ರ ಆಗಸ್ಟ್ 19ರ ಸಚಿವ ಸಂಪುಟದ ನಿರ್ಧಾರವನ್ನು ಮರುಪರಿಶೀಲಿಸಿ, 101 ಜಾತಿಗಳನ್ನು ಸಮರ್ಪಕ ಪ್ರಾತಿನಿಧ್ಯ ಹೊಂದದ ಹಾಗೂ ಸಮರ್ಪಕ ಪ್ರಾತಿನಿಧ್ಯ ಹೊಂದಿರುವ ಗುಂಪುಗಳಾಗಿ ಮರು ವರ್ಗೀಕರಿಸಬೇಕು. ಸೂಕ್ತ ಅಭ್ಯರ್ಥಿ ಲಭ್ಯವಿಲ್ಲದ ಸಂದರ್ಭದಲ್ಲಿ ಮೀಸಲು ಹುದ್ದೆ ಮತ್ತೊಂದು ಗುಂಪಿಗೆ ವರ್ಗಾವಣೆಯಾಗುವ ವ್ಯವಸ್ಥೆ ರೂಪಿಸಬೇಕು. ಪರ್ಯಾಯವಾಗಿ ಸಿ ಗುಂಪಿನಲ್ಲಿರುವ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಸೂಕ್ತ ಪ್ರಮಾಣದ ಮೀಸಲಾತಿ ಕಲ್ಪಿಸಿ, ಉಳಿದ ಹುದ್ದೆಗಳನ್ನು ಪರಿಶಿಷ್ಟ ಜಾತಿ ಸಾಮಾನ್ಯ ವರ್ಗಕ್ಕೆ ಮುಕ್ತವಾಗಿಡಬೇಕು ಎಂದು ಒತ್ತಾಯಿಸಲಾಯಿತು.ಅಲ್ಲದೆ, ಒಳಮೀಸಲಾತಿ ಅನ್ವಯಿಸಿ ಇದುವರೆಗೆ ಹೊರಡಿಸಿರುವ ಪ್ರವೇಶಾತಿ ಮತ್ತು ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಬೇಕು ಅಥವಾ ಕರ್ನಾಟಕ ಹೈಕೋರ್ಟ್ನಲ್ಲಿ ಬಾಕಿ ಇರುವ ಒಳಮೀಸಲಾತಿ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ಅವುಗಳ ಅನುಷ್ಠಾನವನ್ನು ತಡೆಹಿಡಿಯಬೇಕು. 2026ರ ಫೆಬ್ರವರಿ 27ರ ಅಧಿಸೂಚನೆಯಂತೆ ಹಳೆಯ ಮಾನದಂಡಗಳ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಿ, 101 ಪರಿಶಿಷ್ಟ ಜಾತಿಗಳಿಗೂ ಸಮಾನ ನ್ಯಾಯ ಮತ್ತು ಸಮಾನ ಅವಕಾಶ ಕಲ್ಪಿಸಬೇಕು ಎಂದು ಬಂಜಾರ ಸಮುದಾಯಗಳ ಪ್ರತಿನಿಧಿಗಳು ಸರ್ಕಾರವನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಮರೇಶ ನಾಯಕ, ಪ್ರಮುಖರಾದ ಹರೀಶ್ಚಂದ್ರ ರಾಥೋಡ್, ಕೃಷ್ಣಪ್ಪ ಪವಾರ್, ರಮೇಶ ರಾಥೋಡ್, ರಿಂದಾಬಾಯಿ, ಜೀವಲೇ ನಾಯಕ, ನಾರಾಯಣಪ್ಪ ನಾಯಕ, ಡಾ.ನೀಲಪ್ಪ ಪವಾರ್, ತಮ್ಮಣ್ಣ ರಾಥೋಡ್, ರಾಜು.ಜಿ.ಚೌಹಾಣ್, ಶೇಖರಪ್ಪ ರಾಥೋಡ್ ಸೇರಿದಂತೆ ಅನೇಕರಿದ್ದರು.





Recent Comments