Saturday, September 12, 2026
Google search engine
Homeರಾಜ್ಯಎಸ್ಸಿ,ಎಸ್ಟಿ ಆಯೋಗದ ಅಧ್ಯಕ್ಷರು ನೇತೃತ್ವದ ನಿಯೋಗ ಭೇಟಿ ಮತ್ತು ಪರಿಶೀಲನೆ. ಪ್ರಕರಣವನ್ನು ನ್ಯಾಯಯುತವಾಗಿ ನಡೆಸಲು ಸೂಚನೆ:...

ಎಸ್ಸಿ,ಎಸ್ಟಿ ಆಯೋಗದ ಅಧ್ಯಕ್ಷರು ನೇತೃತ್ವದ ನಿಯೋಗ ಭೇಟಿ ಮತ್ತು ಪರಿಶೀಲನೆ. ಪ್ರಕರಣವನ್ನು ನ್ಯಾಯಯುತವಾಗಿ ನಡೆಸಲು ಸೂಚನೆ: ಡಾ.ಮೂರ್ತಿ ಎಲ್.

ರಾಯಚೂರು ಆಗಸ್ಟ್ 30 – ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಮತ್ತು ಸದಸ್ಯರಾದ  ಸುನೀಲ್ ಎಂ.ಉಕ್ಕಲಿ, ಎನ್.ದಿವಾಕರ್, ಗೀತಾ ಥಾಂವಶಿ ಹಾಗೂ ಕಾರ್ಯದರ್ಶಿ ಡಾ.ಹೆಚ್.ಎಸ್.ಶಿವರಾಮು ಅವರು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸದಲ್ಲಿದ್ದು, ರವಿವಾರ ಮೊದಲ ದಿ‌ನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ನಡೆದ ಕೊಲೆ ಪ್ರಕರಣ ವಿಚಾರದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ವಸತಿ ಗೃಹದಿಂದ ನೇರವಾಗಿ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಕು.ಅಶ್ವಿನಿ ಎಂಬುವವರ ಅತ್ಯಾಚಾರ ಹಾಗೂ ಕೊಲೆ ವಿಚಾರದ ಬಗ್ಗೆ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಂದ ಸ್ಥಳ ಪರಿಶೀಲನೆ ನಡೆಸಿದರು.ಅವರು ಮನೆಗೆ ಭೇಟಿ ನೀಡಿ ಮೃತ ಕು.ಅಶ್ವಿನಿ ಅವರ ಭಾವಚಿತ್ರಕ್ಕೆ ವಿವಿಧ ಗಣ್ಯರಿಂದ ಪುಷ್ಪ ನಮನ ಸಲ್ಲಿಸಿದ ನಂತರ ಆಯೋಗದ ಅಧ್ಯಕ್ಷರಿಂದ ಕುಟುಂಬದ ಮಾಹಿತಿ ಪಡೆದರು.ಈ ವೇಳೆ ಆಯೋಗದ ಅಧ್ಯಕ್ಷರು ಮಾತನಾಡಿ,ಪ್ರಕರಣದಡಿ ಆರೋಪಿಗಳಿಗೆ ಕಾನೂನು ಪ್ರಕಾರಕಠಿಣವಾದ ಶಿಕ್ಷೆಯಾಗಲಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಕುಟುಂಬದವರು ಧೈರ್ಯದಿಂದ ಇರಬೇಕು. ಸರ್ಕಾರ ನಿಮ್ಮ ಪರವಾಗಿ ಇರಲಿದೆ ಎಂದರು.ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲಾ ನೆರವು ನೀಡುವ ವ್ಯವಸ್ಥೆಯನ್ನು ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಪ್ರಕರಣವನ್ನು ನ್ಯಾಯಯುತ ಹಾಗೂ ಪಾರದರ್ಶಕವಾಗಿ ನಡೆಸಬೇಕು. ಅಲ್ಲದೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಗದಿತ ಸಮಯದಲ್ಲಿ ಪ್ರಕರಣವನ್ನು ಪೂರ್ಣಗೊಳಿಸಬೇಕು. ದೌರ್ಜನ್ಯಕ್ಕೆ ಒಳಗಾದ ಎಸಿ, ಎಸ್.ಟಿ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ತಕ್ಷಣವೇ ನೀಡಬೇಕೆಂದು ಅಧಿಕಾರಿಗಳಿಗೆ ಹೇಳಿದರು.ಈ ವೇಳೆ ಮೃತ ಬಾಲಕಿಯ ತಂದೆ ಮಾತನಾಡಿ, ನನ್ನ ಮಗಳಿಗೆ ಆದ ಘಟನೆಯನ್ನು ಸಮಾಜದ ಯಾವ ಹೆಣ್ಣುಮಕ್ಕಳಿಗೂ ಆಗಬಾರದು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಯೋಗದ ಮುಂದೆ ಮನವಿ ಮಾಡಿದರು. ಅಲ್ಲದೆ ಗ್ರಾಮದಲ್ಲಿ ಕುತಂತ್ರ ಮಾಡಿ ನನ್ನ ಮಗಳನ್ನು ಬಲಿ ಪಡೆಯಲಾಗಿದೆ ಎಂದರು.*ಪ್ರತಿಭಟನೆ ಸ್ಥಳಕ್ಕೆ ಭೇಟಿ:* ಕು.ಅಶ್ವಿನಿ, ತಿಮ್ಮಾರೆಡ್ಡಿ, ಭೂಮನಂದ, ರಾಣಿಮ್ಮ ಅತ್ಯಾಚಾರ- ಕಗ್ಗೊಲೆ ದೌರ್ಜನ್ಯ ವಿರೋಧಿ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಹೊಕ್ರಾಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಸ್ಥಳಕ್ಕೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರು ಭೇಟಿ ನೀಡಿ, ಮನವಿ ಸ್ವೀಕರಿಸಿದರು.ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಎಲ್. ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಹಾಗೂ ದಲಿತ ಕುಟುಂಬಗಳು ಮತ್ತು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ನಿರಂತರ ಅನ್ಯಾಯ, ದೌರ್ಜನ್ಯ ಹಾಗೂ ಸರಣಿ ಕೊಲೆ- ಅತ್ಯಾಚಾರ ಪ್ರಕರಣಗಳ ಕುರಿತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದರು.ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಮುಖ್ಯಸ್ಥರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗಿದೆ. ಅಲ್ಲದೆರಾಯಚೂರು ಜಿಲ್ಲೆಗೆ ಬರುವ ಮುನ್ನ ಸಮಾಜ ಕಲ್ಯಾಣ ಸಚಿವರು ಹಾಗೂ ಗೃಹ ಸಚಿವರೊಂದಿಗೆ ಸರಣಿ ಅಪರಾಧಗಳ ಕುರಿತು ಚರ್ಚಿಸಲಾಗಿದೆ. ಗೃಹ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಯೋಗ ನೀಡುವ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.*ವರದಿ ಸಲ್ಲಿಕೆಗೆ ಆದೇಶ:* ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲೆ ನಡೆದಿರುವ ಎಲ್ಲಾ ದೌರ್ಜನ್ಯ ಪ್ರಕರಣಗಳ ಸಮಗ್ರ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ತಾಲೂಕಿನ ತಹಸೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ದಲಿತ ಮುಖಂಡರನ್ನೊಳಗೊಂಡ ಸಭೆಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು ಎಂದರು.*ಪ್ರತಿ 3 ತಿಂಗಳಿಗೊಮ್ಮೆ ಆಯೋಗಕ್ಕೆ ವರದಿ ಕೊಡಿ:* ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಂಡ ಕ್ರಮಗಳ ಸಂಪೂರ್ಣ ಮಾಹಿತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಮುಂಬರುವ ಆರು ತಿಂಗಳೊಳಗೆ ಜಿಲ್ಲೆಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಬೇಕು. ಪರಿಸ್ಥಿತಿ ಸುಧಾರಿಸದಿದ್ದರೆ ಮತ್ತು ಅಧಿಕಾರಿಗಳ ಕಡೆಯಿಂದ ನಿಷ್ಕ್ರಿಯತೆ ಕಂಡುಬಂದರೆ, ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಜಿಲ್ಲೆಯಲ್ಲಿ ಶಾಂತಿ, ಭದ್ರತೆ ಹಾಗೂ ಎಲ್ಲಾ ವರ್ಗದ ಜನರಿಗೆ ನ್ಯಾಯ ಸಿಗುವಂತ ವಾತಾವರಣ ನಿರ್ಮಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಆಯೋಗವು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಿದೆ ಎಂದರು.ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ‌.ನರೇಂದ್ರ ಅವರು ಮಾತನಾಡಿ, ದೌರ್ಜನ್ಯ ಖಂಡಿಸಿ ಹೋರಾಟ ನಡೆಸುವ ದಲಿತ ಮುಖಂಡರು ಹಾಗೂ ಹೋರಾಟಗಾರರ ಧ್ವನಿಯನ್ನು ಅಡಗಿಸಲು ಅವರ ವಿರುದ್ಧ ಸುಳ್ಳು ಕೌಂಟರ್ ಕೇಸ್’ ಹಾಕುವ ಯತ್ನ ನಡೆದರೆ, ಅಂತಹ ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಭರವಸೆ ನೀಡಿದ್ದಾರೆ ಎಂದರು.ಪ್ರತಿ ಗ್ರಾಮ ಮತ್ತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಎಸ್‌ಸಿ/ಎಸ್‌ಟಿ ಸಮುದಾಯದ ಕುಂದುಕೊರತೆ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಡಿವೈಎಸ್‌ಪಿ, ಇನ್‌ಸ್ಪೆಕ್ಟರ್ ಹಾಗೂ ಎಸ್‌ಪಿಗಳು ಈ ಸಭೆಗಳನ್ನು ಕೇವಲ ‘ಕಾಟಚಾರಕ್ಕೆ’ ಮಾಡದೇ, ಬೀಟ್ ಪೋಲಿಸರ ಮೂಲಕ ಗ್ರಾಮಗಳ ನೈಜ ಸ್ಥಿತಿಗತಿಯ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸಬೇಕು ಎಂದು ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.ಯಾವುದೇ ಸಮಾಜ ಅಥವಾ ವರ್ಗದ ಹೆಣ್ಣುಮಗಳಿಗೆ ಇಂತಹ ಸ್ಥಿತಿ ಬರಬಾರದು. ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸುವವರೆಗೆ ಮತ್ತು ಈ ಅನ್ಯಾಯದ ವಿರುದ್ಧ ನಾವೆಲ್ಲರೂ ನಿರಂತರವಾಗಿ ಹೋರಾಟ ನಡೆಸಲಿದ್ದೇವೆ ಎಂದರು.ಇದೇ ಸಂದರ್ಭದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಸಿರವಾರ ತಹಶಿಲ್ದಾರ್ ಚಂದ್ರಶೇಖರ ಪವಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

RELATED ARTICLES
- Advertisment -
Google search engine

Most Popular

Recent Comments