ರಾಯಚೂರು: ಪತ್ರಿಕೋದ್ಯಮವು ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಜನಪರ ಅಭಿವೃದ್ಧಿಗೆ ದಾರಿಯಾಗುವ ಪ್ರಜಾಪ್ರಭುತ್ವದ ಪ್ರಮುಖ ಶಕ್ತಿಯಾಗಿದ್ದು, ಪತ್ರಕರ್ತರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿವರ್ಷ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ಸಾಧಕ ಪತ್ರಕರ್ತರನ್ನು ಸನ್ಮಾನಿಸುವ ಮೂಲಕ ವೃತ್ತಿಗೆ ಗೌರವ ತರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ರಾಜ್ಯದಾದ್ಯಂತ ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಕ್ರಿಯಾಶೀಲ ನಾಯಕತ್ವದಿಂದ ಸಾವಿರಾರು ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಯುತ್ತಿದೆ ಎಂದು ಶ್ಲಾಘಿಸಿದರು.ಪತ್ರಿಕೋದ್ಯಮವು ಸಮಾಜದಲ್ಲಿ ಅತ್ಯಂತ ಗೌರವಯುತ ಸ್ಥಾನ ಹೊಂದಿದೆ. ಜಿಲ್ಲೆಯ ಹಿರಿಯ ಪತ್ರಕರ್ತರು ಹಲವು ದಶಕಗಳಿಂದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನೀರಾವರಿ, ಕಾರ್ಮಿಕರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಪತ್ರಕರ್ತರು ವಹಿಸಿದ ಪಾತ್ರ ಸ್ಮರಣೀಯವಾಗಿದೆ ಎಂದು ಹೇಳಿದರು.ದಿವಂಗತ ಎನ್.ಕೆ. ಕುಲಕರ್ಣಿ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ರಾಯಚೂರು ಭಾಗದ ಸಮಸ್ಯೆಗಳನ್ನು ಜನರು ಮತ್ತು ಸರ್ಕಾರದ ಮುಂದಿಡುವ ಉದ್ದೇಶದಿಂದ ಸ್ಥಳೀಯ ಪತ್ರಿಕೆಗಳನ್ನು ಆರಂಭಿಸಿ ಸಮಾಜಮುಖಿ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದರು. ಇಂದು ಜಿಲ್ಲೆಯಾದ್ಯಂತ ಪತ್ರಿಕೋದ್ಯಮ ಗ್ರಾಮ ಹಾಗೂ ಹೋಬಳಿ ಮಟ್ಟಕ್ಕೂ ವಿಸ್ತರಿಸಿರುವುದು ಸಂತಸದ ಸಂಗತಿ ಎಂದರು.ಕೆಲವರು ವೈಯಕ್ತಿಕ ಉದ್ದೇಶಕ್ಕಾಗಿ ಪತ್ರಿಕೋದ್ಯಮವನ್ನು ದುರುಪಯೋಗಪಡಿಸಿಕೊಳ್ಳುವುದು ವೃತ್ತಿಗೆ ಕಳಂಕ ತರುತ್ತದೆ. ಪತ್ರಕರ್ತರು ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಗುರುನಾಥ್ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ 41ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿ ಜಿಲ್ಲೆಯ ಹೆಸರನ್ನು ರಾಜ್ಯಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.ಪತ್ರಕರ್ತರ ಬಸ್ ಪಾಸ್, ಆರೋಗ್ಯ, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಗಳು ಕ್ರಮ ಕೈಗೊಂಡಿವೆ. ಇತ್ತೀಚಿನ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಭರವಸೆಗಳನ್ನೂ ಸರ್ಕಾರ ಈಡೇರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ರಾಯಚೂರಿನಂತಹ ಹಿಂದುಳಿದ ಜಿಲ್ಲೆಯಲ್ಲಿ ಪತ್ರಕರ್ತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಅನೇಕರು ಸ್ವಂತ ಪತ್ರಿಕೆಗಳನ್ನು ನಡೆಸುತ್ತಾ ಜಿಲ್ಲೆಯ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರ ಸಭಾಭವನ ಸೇರಿದಂತೆ ಸಂಘದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಮುಂದೆಯೂ ನೀಡುವುದಾಗಿ ಭರವಸೆ ನೀಡಿದರು.





Recent Comments