ಸಿಂಧನೂರು: ಪಟ್ಟಣದ ಅಂಬೇಡ್ಕರ್ವಸತಿ ನಿಲಯದಲ್ಲಿ ಉಪಹಾರ ಸೇವಿಸಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯದ 13 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಸಿಂಧನೂರು ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗ್ಗೆ ವಸತಿ ನಿಲಯದಲ್ಲಿ ಚಪಾತಿ, ಅನ್ನ ಸಾಂಬಾರು ಆಹಾರ ಸೇವಿಸಿದ ವಿದ್ಯಾರ್ಥಿನಿಯರಿಗೆ ಹೊಟ್ಟೆ ನೋವು, ತಲೆ ಸುತ್ತ ಕಾಣಿಸಿಕೊಂಡಿದೆ. ನಂತರ ವಿದ್ಯಾರ್ಥಿನಿಯರನ್ನು ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ವಸತಿ ನಿಲಯದ ವಾರ್ಡನ್ ಶೋಭಾ ಎನ್ನುವವರು ರಜೆಯಲ್ಲಿದ್ದು, ತಾಲ್ಲೂಕು ಅಧಿಕಾರಿ ನಟರಾಜ್ ಅವರು ಪ್ರಭಾರಿವಹಿಸಲಾಗಿದೆ. ಅಧಿಕಾರಿಗಳ ಲೋಪದಿಂದ ಈ ರೀತಿಯ ಘಟನೆ ನಡೆದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವಾರ ಅಲ್ಪಸಂಖ್ಯಾತ ವಸತಿ ನಿಲಯದ ವಿದ್ಯಾರ್ಥಿಗಳು ಉಪಹಾರ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖುದ್ದು ಶಾಸಕ ಹಂಪನಗೌಡ ಬಾದರ್ಲಿ ಅವರೇ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ನಂತರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತವರಣ ನಿರ್ಮಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದೀಗ ನಗರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದಕೈಗನ್ನಡಿಯಾಗಿದೆ.ವಸತಿ ನಿಲಯದ 5 ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎಲ್ಲ ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ ಎಂದು ಸಹಾಯಕ ಉಪನಿರ್ದೇಶಕ ನಟರಾಜ ತಿಳಿಸಿದ್ದಾರೆ.-






Recent Comments