ರಾಯಚೂರು: ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ರಾಜ್ಯ ಕಾರ್ಯದರ್ಶಿ ಎಂ.ಗಂಗಾಧರ ಕರೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ದಶಕಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರು ದುಡಿಯುತ್ತಿದ್ದರೂ ಅವರಿಗೆ ಮೂಲಭೂತ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು. ಕಾಯಂ ಹುದ್ದೆಗಳಿದ್ದರೂ ಗುತ್ತಿಗೆ ಪದ್ಧತಿಯ ಮೂಲಕವೇ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಗುತ್ತಿಗೆ ಕಾರ್ಮಿಕರಿಗೆ ಕಾಯಂ ಕಾರ್ಮಿಕರ ಸಂಬಳದ ಕೇವಲ ಶೇಕಡ 25ರಷ್ಟೇ ನೀಡಲಾಗುತ್ತಿದ್ದು, ತಿಂಗಳ ಸಂಬಳವೂ ನಿಯಮಿತವಾಗಿ ಪಾವತಿಯಾಗುತ್ತಿಲ್ಲ. ಜೊತೆಗೆ ಭವಿಷ್ಯ ನಿಧಿ (PF) ಹಾಗೂ ಇಎಸ್ಐ ಸೌಲಭ್ಯಗಳು ಕೂಡ ಕಡ್ಡಾಯವಾಗಿ ಸಿಗುತ್ತಿಲ್ಲ. 8 ಗಂಟೆಗಳಿಗಿಂತ ಹೆಚ್ಚು ದುಡಿಮೆ, ವಾರದ ಹಾಗೂ ರಾಷ್ಟ್ರೀಯ ರಜೆಗಳ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಅಮೆರಿಕಾ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟಕ್ಕೆ ಅಜೀಜ್ ಜಾಗೀರದಾರ್ ಕರೆ
ಗುತ್ತಿಗೆ ಪದ್ಧತಿಯು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ವ್ಯವಸ್ಥೆಯಾಗಿದ್ದು, ಇದನ್ನು ಸಂಪೂರ್ಣವಾಗಿ ನಿಷೇಧಿಸಿ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಅದುವರೆಗೆ ಸಮಾನ ದುಡಿಮೆಗೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 24, 2026ರಂದು ಬೆಳಿಗ್ಗೆ 9 ಗಂಟೆಗೆ ರಾಯಚೂರಿನ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಗುತ್ತಿಗೆ ಕಾರ್ಮಿಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಜಿಲ್ಲೆಯ ಕೃಷಿ, ಹಾಸ್ಟೆಲ್, ವಸತಿ ಶಾಲೆ, ಕಂದಾಯ, ಗಣಿ, ನೀರಾವರಿ, ಆರೋಗ್ಯ, ಇಂಧನ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾರ್ಮಿಕರು ಭಾಗವಹಿಸಬೇಕೆಂದು ಕರೆ ನೀಡಲಾಗಿದೆ.
ಸಮಾವೇಶದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಶರಣು ಪ್ರಕಾಶ್ ಪಾಟೀಲ್, ಜಿಲ್ಲಾಧಿಕಾರಿ ನಿತೀಶ್ ಕೆ., TUCI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ, ರಾಜ್ಯಾಧ್ಯಕ್ಷ ಎಂ.ಡಿ. ಅಮಿರ್ ಅಲಿ ಸೇರಿದಂತೆ ಕಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಹೆಸರೂರು, ರಮೇಶ್, ವಿಂಡ್ ಪವರ್, ಮಹಮ್ಮದ್ ಶಫಿ, ನಾಗರಾಜ್ ಗಿಲ್ಲೆಸಗೂರು, ಎಂ. ನಿರಂಜನಕುಮಾರ್ ಉಪಸ್ಥಿತರಿದ್ದರು.




Recent Comments