ಗ್ರಾಮೀಣ ಭಾಗದ ರೈತರ ಕನಸಿಗೆ ಜೀವ ತುಂಬಿದ ಐತಿಹಾಸಿಕ ನಿರ್ಧಾರ – ಶಾಸಕ ಬಸನಗೌಡ ದದ್ದಲ್
₹182 ಕೋಟಿ ವೆಚ್ಚದ ಯೋಜನೆಯಿಂದ 16ರಿಂದ 20 ಸಾವಿರ ಎಕರೆಗೂ ಅಧಿಕ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ; ಗ್ರಾಮಸ್ಥರಿಂದ ಶಾಸಕ ಬಸನಗೌಡ ದದ್ದಲ್ ಅವರಿಗೆ ಅಭಿನಂದನೆ
ರಾಯಚೂರು: ಮಟಮಾರಿ ಶ್ರೀ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ರಾಯಚೂರು ಗ್ರಾಮೀಣ ಕ್ಷೇತ್ರದ ಸಂಪೂರ್ಣ ನೀರಾವರಿ ಕನಸನ್ನು ನನಸಾಗಿಸುವ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾರೆ.
₹182 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಸುಮಾರು 16,000 ರಿಂದ 20,000ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಸಾವಿರಾರು ರೈತ ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಲಿದೆ ಎಂದು ಅವರು ಹೇಳಿದರು.
ಸಚಿವ ಸಂಪುಟದಿಂದ ಯೋಜನೆಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ವಿಶೇಷವಾಗಿ ಮಟಮಾರಿ ಭಾಗದ ಗ್ರಾಮಸ್ಥರು ಶಾಸಕ ಬಸನಗೌಡ ದದ್ದಲ್ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಅಭಿವೃದ್ಧಿ, ಗ್ರಾಮೀಣ ಸಮೃದ್ಧಿ ಹಾಗೂ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳು ನಿರಂತರವಾಗಿ ಮುಂದುವರೆಯಲಿವೆ ಎಂದು ತಿಳಿಸಿದರು.
ಯೋಜನೆಗೆ ಅನುಮೋದನೆ ನೀಡಿದ ರಾಜ್ಯ ಸರ್ಕಾರ, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಶಾಸಕ ಬಸನಗೌಡ ದದ್ದಲ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.




Recent Comments