Friday, June 12, 2026
Google search engine
Homeರಾಯಚೂರುನಕಲಿ ಬೀಜ ಮಾರಾಟಕ್ಕೆ ಬ್ರೇಕ್ ಹಾಕಿ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ದದ್ದಲ್ ಸೂಚನೆ

ನಕಲಿ ಬೀಜ ಮಾರಾಟಕ್ಕೆ ಬ್ರೇಕ್ ಹಾಕಿ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ದದ್ದಲ್ ಸೂಚನೆ

ರಾಯಚೂರು: ಮುಂಗಾರು ಬಿತ್ತನೆ ಆರಂಭವಾಗಿರುವ ಈ ಸಂದರ್ಭದಲ್ಲಿ ರೈತರನ್ನು ವಂಚಿಸುವ ನಕಲಿ ಬಿತ್ತನೆ ಬೀಜಗಳ ಜಾಲವನ್ನು ಮಟ್ಟಹಾಕಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚಿಸಿದರು. ದೂರುಗಳು ಬಂದ ತಕ್ಷಣವೇ ಪೊಲೀಸ್ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಸಂಬಂಧಿಸಿದ ಅಂಗಡಿ ಮಾಲೀಕರು ಮತ್ತು ಬೀಜ ಪೂರೈಕೆ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ನಿರ್ದೇಶನ ನೀಡಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕಳಪೆ ಗುಣಮಟ್ಟದ ಹಾಗೂ ನಕಲಿ ಬೀಜಗಳಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಬಿತ್ತನೆ ಮಾಡಿದ ಹಲವು ತಿಂಗಳ ನಂತರವೇ ಬೀಜದ ಗುಣಮಟ್ಟದ ಬಗ್ಗೆ ಗೊತ್ತಾಗುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಕೃಷಿ ಇಲಾಖೆ ಮುಂಚಿತವಾಗಿ ತಪಾಸಣೆ ನಡೆಸಿ ರೈತರ ಹಿತ ಕಾಪಾಡಬೇಕು ಎಂದು ತಿಳಿಸಿದರು.

ರಸಗೊಬ್ಬರವನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಸಾಗಿಸುತ್ತಿರುವ ಪ್ರಕರಣಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಇಂತಹ ಚಟುವಟಿಕೆಗಳನ್ನು ಸಹಿಸದೆ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಬೇಕು. ವಿಶೇಷವಾಗಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಕಾಮಗಾರಿಗಳ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಟಮಾರಿ ಗ್ರಾಮದ ನೀರಿನ ಟ್ಯಾಂಕ್ ನಿರ್ಮಾಣ ವಿಚಾರದಲ್ಲಿ ಇನ್ನಷ್ಟು ವಿಳಂಬ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಕಲಮಲಾ ಗ್ರಾಮದ ಕುಡಿಯುವ ನೀರಿನ ಯೋಜನೆಯ ಉಳಿದ ಕಾಮಗಾರಿಗಳನ್ನು ಜೂನ್ 25ರೊಳಗೆ ಪೂರ್ಣಗೊಳಿಸಿ ಗ್ರಾಮಗಳಿಗೆ ನೀರು ಪೂರೈಕೆ ಆರಂಭಿಸುವಂತೆ ಅಧಿಕಾರಿಗಳಿಗೆ ಗಡುವು ವಿಧಿಸಿದರು.

ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಮಾದಕ ವಸ್ತುಗಳ ನಿಯಂತ್ರಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ರಾಜ್ಯದಲ್ಲಿ ನಡೆಯಲಿರುವ 57 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಗ್ರಾಮೀಣ ಯುವಕರಿಗೆ ಅರಿವು ಮೂಡಿಸುವ ಕೆಲಸವನ್ನೂ ಇಲಾಖೆಗಳು ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಆರ್‌ಎಪಿಎಂಸಿ ಅಧ್ಯಕ್ಷ ಜಯಂತರಾವ್ ಪತಂಗೆ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪವನ್ ಕಿಶೋರ ಪಾಟೀಲ್, ನಾಮನಿರ್ದೇಶಿತ ಸದಸ್ಯರಾದ ಈರೇಶ, ತಿಮ್ಮಪ್ಪ ನಾಯಕ, ಜಿಂದಪ್ಪ, ಶರಣಬಸವ, ರಾಯಚೂರು ವಿವಿ ಸಿಂಡಿಕೇಟ್ ಸದಸ್ಯ ಚನ್ನಬಸವ, ಎಪಿಎಂಸಿ ಉಪಾಧ್ಯಕ್ಷ ಬಸೀರ್ ಅಹ್ಮದ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ವನಿತಾ, ಡಿವೈಎಸ್‌ಪಿ ಶಾಂತವೀರ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ತಹಶೀಲ್ದಾರ್ ಸುರೇಶ್ ವರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments