ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಘೋಷಣೆಯೊಂದಿಗೆ ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಅವಕಾಶ ದೊರಕಿಲ್ಲ.
ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಪಕ್ಷದ ಮಾಜಿ ರಾಜ್ಯ ಉಪಾಧ್ಯಕ್ಷ ಪ್ರೊ. ಎಂ. ನಾಗರಾಜ್ ಅವರನ್ನು ಆಯ್ಕೆ ಮಾಡಿದೆ. ಪಕ್ಷದ ಸಂಘಟನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅವರಿಗೆ ಹೈಕಮಾಂಡ್ ಮನ್ನಣೆ ನೀಡಿದೆ.
ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಲಿಂಗರಾಜ್ ಪಾಟೀಲ್ ಹಾಗೂ ರಘು ಕೌಟಿಲ್ಯ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಘೋಷಿಸಿದೆ. ಲಿಂಗರಾಜ್ ಪಾಟೀಲ್ ಅವರು ಪಕ್ಷದ ಶಿಸ್ತು ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದರೆ, ರಘು ಕೌಟಿಲ್ಯ ರಾಜ್ಯ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯಸಭೆ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ನಿರ್ಮಲ್ ಕುಮಾರ್ ಹಾಗೂ ಸುಮಲತಾ ಅಂಬರೀಶ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಅದೇ ರೀತಿ ವಿಧಾನ ಪರಿಷತ್ ಸ್ಥಾನಗಳಿಗೆ ರಘು ಕೌಟಿಲ್ಯ, ಪ್ರಮೋದ್ ಮಧ್ವರಾಜ್, ನಳಿನ್ ಕುಮಾರ್ ಕಟೀಲು, ಲಿಂಗರಾಜ್ ಪಾಟೀಲ್, ಮಂಜುಳಾ ಹಾಗೂ ಶರಣು ತಳ್ಳಿಕೇರಿ ಸೇರಿದಂತೆ ಹಲವು ನಾಯಕರ ಹೆಸರುಗಳು ಪರಿಗಣನೆಯಲ್ಲಿದ್ದವು.
ಕೊನೆ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯಸಭೆಗೆ ಪ್ರೊ. ಎಂ. ನಾಗರಾಜ್ ಅವರನ್ನು ಹಾಗೂ ವಿಧಾನ ಪರಿಷತ್ತಿಗೆ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಅಧಿಕೃತ ಅಭ್ಯರ್ಥಿಗಳಾಗಿ ಘೋಷಿಸುವ ಮೂಲಕ ಚುನಾವಣಾ ಕಣಕ್ಕೆ ಇಳಿಸಿದೆ. ಈ ನಿರ್ಧಾರದಿಂದ ಜೆಡಿಎಸ್ ಕೋಟಾದಡಿ ಹೆಚ್.ಡಿ. ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆ ಅಂತ್ಯಗೊಂಡಿದೆ.




Recent Comments