ರಾಯಚೂರು: ಭಾರತದ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ತರಬೇತಿ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಹಲವಾರು ದೋಷಗಳು ಕಂಡುಬಂದಿದ್ದು, ಅಧಿಕಾರಿಗಳ ಎಐ ಅವಲಂಬನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಗ್ರಾಫಿಕ್ಸ್ ವಿನ್ಯಾಸಕರಿಂದ ಸಿದ್ಧಪಡಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ಮಾಹಿತಿಯನ್ನು ಎಐಗೆ ನೀಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ.
ಆದರೆ ಎಐ ಮೂಲಕ ಸಿದ್ಧವಾದ ವಿನ್ಯಾಸಗಳನ್ನು ಸೂಕ್ತವಾಗಿ ಪರಿಶೀಲಿಸದೆ ಅಂತಿಮಗೊಳಿಸಿದರೆ ಇಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಚುನಾವಣಾ ಆಯೋಗದ ಮಹತ್ವದ ತರಬೇತಿ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ಬ್ಯಾನರ್‌ನಲ್ಲಿ ಪದಗಳ ತಪ್ಪು ಬಳಕೆ, ಅಕ್ಷರ ದೋಷಗಳು ಹಾಗೂ ಕೆಲವು ಮಾಹಿತಿಗಳಲ್ಲಿನ ಗೊಂದಲಗಳು ಕಂಡುಬಂದಿವೆ.
ವಿಶೇಷ ಪರಿಷ್ಕರಣೆ,, ಮತದಾರರ ಪಟ್ಟಿ ಪರಿಶೀಲನೆ ಮತ್ತು ಸೇರ್ಪಡೆ, ಬೂತ್ ಮಟ್ಟದ ಅಧಿಕಾರಿಗಳು, ಜಿಲ್ಲಾ, ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಎಂಬ ಪದಗಳಲ್ಲಿ ದೋಷಗಳು ಕಂಡುಬಂದವು.
ಎಐ ತಂತ್ರಜ್ಞಾನ ವೇಗವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರೂ, ಅದು ನೀಡುವ ಮಾಹಿತಿಯನ್ನು ಮಾನವ ಪರಿಶೀಲನೆಗೆ ಒಳಪಡಿಸುವುದು ಅಗತ್ಯವಾಗಿದೆ. ಎಐ ಸ್ವತಃ ತಾನು ಕೆಲವೊಮ್ಮೆ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುವುದಾಗಿ ಸೂಚಿಸುತ್ತದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಬ್ಯಾನರ್ ಅನ್ನು ಮರುಪರಿಶೀಲನೆ ಮಾಡದೇ ಅಂತಿಮಗೊಳಿಸಿರುವುದು ಗಮನ ಸೆಳೆದಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಳಸುವ ಬ್ಯಾನರ್‌ಗಳು ಮತ್ತು ಪ್ರಕಟಣೆಗಳು ಸಾರ್ವಜನಿಕರ ಗಮನ ಸೆಳೆಯುವ ಪ್ರಮುಖ ಮಾಧ್ಯಮವಾಗಿರುವುದರಿಂದ, ಅವುಗಳಲ್ಲಿ ಭಾಷಾ ದೋಷಗಳು ಹಾಗೂ ಮಾಹಿತಿ ತಪ್ಪುಗಳು ಕಂಡುಬರದಂತೆ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.




Recent Comments