ರಾಯಚೂರು .ಅ.8 – ರಾಯಚೂರು ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿರುವ ಕರ್ನಾಟಕ ಸರ್ಕಾರದ ನೂತನ ಸಚಿವರಾದ ಡಾ.ಅಜಯ್ ಧರಂಸಿಂಗ್ ಅವರು 2ನೇ ದಿನವೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬರ ಪರಿಶೀಲನೆ ನಡೆಸುವಲ್ಲಿ ನಿರತರಾದರು.ಈ ವೇಳೆ ಕರ್ನಾಟಕ ಸರ್ಕಾರದ ನೂತನ ಸಚಿವರಾದ ಡಾ.ಅಜಯ್ ಧರಂಸಿಂಗ್ ಅವರು ಪೋತ್ನಾಳ ಗ್ರಾಮದ ಜಮೀನಿನ ಪರಿಶೀಲನೆ ನಂತರ ಮಾತನಾಡಿದ ಅವರು ರಾಯಚೂರು ಜಿಲ್ಲೆಯಲ್ಲಿ ಮಳೆಯ ಅಭಾವ ಹಾಗೂ ಕೃಷಿ ಬಿಕ್ಕಟ್ಟಿನಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಮಸ್ಕಿ ಮತ್ತು ಸಿಂಧನೂರು ತಾಲೂಕುಗಳ ವಿವಿಧ ಪ್ರದೇಶಗಳಿಗೆ ಜನಪ್ರತಿನಿಧಿಗಳ ಹಾಗೂ ನಾಯಕರ ತಂಡ ಭೇಟಿ ನೀಡಿ, ನೇರವಾಗಿ ರೈತರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಆಲಿಸಲಾಗುತ್ತಿದೆ.ಜಿಲ್ಲೆಯಲ್ಲಿ ಪ್ರಸಕ್ತ ಕೃಷಿ ಸ್ಥಿತಿ ಆತಂಕಕಾರಿಯಾಗಿದೆ. ಪ್ರತಿ ವರ್ಷ ಕನಿಷ್ಠ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತಿತ್ತು. ಆದರೆ ಈ ಬಾರಿ ಕೇವಲ 12,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ ಸುಮಾರು 4,000 ಹೆಕ್ಟೇರ್ ಹತ್ತಿ ಹಾಗೂ 7,000 ಹೆಕ್ಟೇರ್ ಸೂರ್ಯಕಾಂತಿ ಬೆಳೆ ಸೇರಿದೆ ಎಂದರು.ವಾಡಿಕೆಯಂತೆ ನಡೆಯಬೇಕಿದ್ದ 1 ಲಕ್ಷ ಹೆಕ್ಟೇರ್ ಬಿತ್ತನೆಗೆ ಹೋಲಿಸಿದರೆ ಈ ಬಾರಿ ಬಿತ್ತನೆಯಾಗಿರುವುದು ಕೇವಲ 12,000 ಹೆಕ್ಟೇರ್ ಮಾತ್ರ. ಮಸ್ಕಿಯಿಂದ ಸಿಂಧನೂರುವರೆಗಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ರೈತರ ಸಂಕಷ್ಟದ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಲಾಗುತ್ತಿದೆ.ನಮ್ಮ ಸರ್ಕಾರ ಸಂಪೂರ್ಣವಾಗಿ ರೈತರ ಪರವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೆ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಸೂಕ್ತ ಪರಿಹಾರ ಧನ ಹಾಗೂ ಕೃಷಿ ಸೌಲಭ್ಯಗಳನ್ನು ತಲುಪಿಸಲು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.*ವಿವಿಧ ಸ್ಥಳಗಳ ವೀಕ್ಷಣೆ:* ಬರ ಪರಿಸ್ಥಿತಿ, ಅತಿವೃಷ್ಠಿ ನಿರ್ವಹಣೆ ಕುರಿತ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಜಯ್ ಧರಂಸಿಂಗ್ ಅವರು ರಾಯಚೂರು ಜಿಲ್ಲೆಯಲ್ಲಿ ಎರಡನೇ ದಿನವೂ ಪ್ರವಾಸ ಮುಂದುವರೆದಿದ್ದು, ರಾಯಚೂರು ಜಿಲ್ಲೆಯ ಮಾನ್ವಿ, ಮಸ್ಕಿ ಹಾಗೂ ಸಿಂಧನೂರು ತಾಲೂಕಿನ ಬರ ನಷ್ಟಕ್ಕೆ ಒಳಗಾದ ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಶನಿವಾರ ಬೆಳಿಗ್ಗೆ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಸರ್ಕಿಟ್ ಹೌಸ್ ನಿಂದ ನೇರವಾಗಿ ಮಸ್ಕಿ ತಾಲ್ಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಬಾಧಿತ ತೊಗರಿ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿ, ನಂತರ ಗುಡದೂರು ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಬಾಧಿತ ಸೂರ್ಯಕಾಂತಿ, ತೊಗರಿ ಹಾಗೂ ಹತ್ತಿ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿದರು.ನಂತರ ಹಸಮಕಲ್ ಗ್ರಾಮದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕೆರೆ ವೀಕ್ಷಣೆ ಮಾಡಿದರು. ಸಿಂಧನೂರು ತಾಲ್ಲೂಕಿನ ಜವಳಗೇರ ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಬಾಧಿತ ಹತ್ತಿ ಬೆಳೆಯ ಕ್ಷೇತ್ರ ಹಾಗೂ ಬನ್ನಿಗನೂರು ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಬಾಧಿತ ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿದರು. ನಂತರ ಮಾನ್ವಿ ತಾಲೂಕಿನ ಹಿರೇಕೊಟ್ಟೆಕಲ್ ಹೋಬಳಿಯ ಪೋತನಾಳ್ ಗ್ರಾಮದಲ್ಲಿ ತೇವಾಂಶ ಕೊರತೆಯಿಂದ ಬಾಧಿತ ಹತ್ತಿ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿ, ನೇರವಾಗಿ ಮಾನ್ವಿ ಪ್ರವಾಸ ಮಂದಿರಕ್ಕೆ ಆಗಮಿಸಿ ಮುಖಂಡರು ಚರ್ಚಿಸಿದರು.ಇದೇ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು, ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣ್ಣೆಪ್ಪ ಕಲಶೆಟ್ಟಿ, ಸಿಂಧನೂರು ತಹಶಿಲ್ದಾರ್ ಅರುಣ್ ಕುಮಾರ್ ದೇಸಾಯಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌವ್ಹಾಣ್, ಉಪ ನಿರ್ದೇಶಕ ನಹೀಂ ಹುಸೇನ್ ಸೇರಿದಂತೆ ಇತರರು ಇದ್ದರು.





Recent Comments