ಮಂತ್ರಾಲಯ, ಆಗಸ್ಟ್ 3: ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಆಗಸ್ಟ್ 26ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿರುವ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರು, ಶಿಷ್ಯರು, ಗಣ್ಯರು ಹಾಗೂ ಅಧಿಕಾರಿಗಳ ಆಗಮನ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಮಠದ ಆಡಳಿತ ಮಂಡಳಿಯು ಮಹತ್ವದ ಪ್ರಕಟಣೆ ಹೊರಡಿಸಿದೆ.ಆರಾಧನಾ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ವಸತಿ ವ್ಯವಸ್ಥೆ ಮತ್ತು ದರ್ಶನ ವ್ಯವಸ್ಥೆ ಕಲ್ಪಿಸುವುದು ಆಡಳಿತ ಮಂಡಳಿಗೆ ಸವಾಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಪ್ರತಿವರ್ಷ ಈ ಅವಧಿಯಲ್ಲಿ ಮುಂಗಡ ಕೊಠಡಿ ಬುಕ್ಕಿಂಗ್ ಹಾಗೂ ದರ್ಶನಕ್ಕಾಗಿ ಶಿಫಾರಸು ಪತ್ರಗಳ ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಭಕ್ತರಿಗೆ ಕೌಂಟರ್ಗಳ ಮೂಲಕ ನೇರವಾಗಿ ಕೊಠಡಿಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಮಠದ ಆಡಳಿತ ತಿಳಿಸಿದೆ.ಅದರಂತೆ, ಆಗಸ್ಟ್ 26ರಿಂದ ಸೆಪ್ಟೆಂಬರ್ 3ರವರೆಗೆ ಮುಂಗಡ ಕೊಠಡಿ ಬುಕ್ಕಿಂಗ್ ಹಾಗೂ ದರ್ಶನಕ್ಕಾಗಿ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಮಠದ ಆಡಳಿತ ಸ್ಪಷ್ಟಪಡಿಸಿದೆ.ಆದರೆ, ಪೂರ್ವ ಸೂಚನೆಯ ಆಧಾರದ ಮೇಲೆ ಕೊಠಡಿ ದಾನಿಗಳಿಗೆ ಅಗತ್ಯ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.ಭಕ್ತರು ಮಠದ ಆಡಳಿತದ ಈ ನಿರ್ಧಾರವನ್ನು ಅರ್ಥಮಾಡಿಕೊಂಡು ಸಹಕರಿಸುವಂತೆ ಮ್ಯಾನೇಜರ್ ಮನವಿ ಮಾಡಿದ್ದಾರೆ.





Recent Comments