Friday, June 5, 2026
Google search engine
Homeರಾಯಚೂರುರಾಯಚೂರಿನಲ್ಲಿ ಶ್ರೀ ಆದಿ ಶಂಕರಾಚಾರ್ಯರ ಜಯಂತೋತ್ಸವ ಆಚರಣೆ

ರಾಯಚೂರಿನಲ್ಲಿ ಶ್ರೀ ಆದಿ ಶಂಕರಾಚಾರ್ಯರ ಜಯಂತೋತ್ಸವ ಆಚರಣೆ

ರಾಯಚೂರು: ಆದಿ ಶಂಕರಾಚಾರ್ಯ ಅವರು ಸನಾತನ ಧರ್ಮ ರಕ್ಷಣೆಗಾಗಿ ಮಾಡಿದ ಮಹಾನ್ ಕಾರ್ಯ ಇಂದಿಗೂ ಶಾಶ್ವತವಾಗಿದ್ದು, ಸಹಸ್ರಾರು ವರ್ಷಗಳ ನಂತರವೂ ಅದರ ಮಹತ್ವ ಕಡಿಮೆಯಾಗಿಲ್ಲ ಎಂದು ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ ಎಸ್. ಪಾಟೀಲ್ ಹೇಳಿದರು.

ನಗರದ ಗಾಜಗಾರಪೇಟೆಯ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಹಿಂದೂ ಎಂದು ಹೇಳಿಕೊಳ್ಳಲು ಶಂಕರಾಚಾರ್ಯರು ಮೂಲಕಾರಣರಾಗಿದ್ದು, ಅವರ ತತ್ವಗಳು ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ರಾಯಚೂರಿನ ಶೃಂಗೇರಿ ಶಂಕರ ಮಠಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಿನ ಧಾರ್ಮಿಕ ಉಪನ್ಯಾಸಕರಾದ ಸುಪ್ರತೀಕ ಭಟ್ ಅವರು, ಆದಿ ಶಂಕರಾಚಾರ್ಯರು ಭಾರತದ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದು, ಅದ್ವೈತ ವೇದಾಂತದ ಅಡಿಪಾಯವನ್ನು ಹಾಕಿ ಹಿಂದೂ ಧರ್ಮ ಪುನರುಜ್ಜೀವನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕೇರಳದ ಕಾಲಡಿಯಲ್ಲಿ ಜನಿಸಿದ ಶಂಕರಾಚಾರ್ಯರು ದೇಶವನ್ನು ಮೂರು ಬಾರಿ ಕಾಲ್ನಡಿಗೆಯಲ್ಲಿ ಸುತ್ತಿ ಧರ್ಮದ ಹೆಸರಿನಲ್ಲಿ ಹರಡುತ್ತಿದ್ದ ತಪ್ಪು ಕಲ್ಪನೆಗಳನ್ನು ನಿವಾರಿಸಿದರು. ಅವರ ಅದ್ವೈತ ಸಿದ್ಧಾಂತವು ಭಾರತೀಯ ತತ್ವಶಾಸ್ತ್ರಕ್ಕೆ ಮಹತ್ವದ ದಿಕ್ಕು ನೀಡಿತು ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಶೃಂಗೇರಿ ಶಂಕರ ಮಠದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ಜರುಗಿತು.

ಇದೇ ವೇಳೆ ತಹಶೀಲ್ದಾರ್ ಪರಶುರಾಮ, ಪ್ರಾಧ್ಯಾಪಕ ಡಾ. ಪ್ರಾಣೇಶ್ ಕುಲಕರ್ಣಿ, ಕಚೇರಿ ವ್ಯವಸ್ಥಾಪಕ ರಾಜು, ಶೈಲಜಾ ಆರ್. ಕುಲಕರ್ಣಿ, ದಂಡಪ್ಪ ಬಿರಾದಾರ್ ಸೇರಿದಂತೆ ಹಲವು ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments