Friday, March 27, 2026
Google search engine
Homeರಾಯಚೂರುಕಲ್ಯಾಣ ಕರ್ನಾಟಕದ ವಾಲ್ಮೀಕಿ ನಾಯಕ ಸಮುದಾಯಕ್ಕೂ ಪೌಷ್ಠಿಕ ಆಹಾರ ಕಿಟ್ ವಿಸ್ತರಣೆ ಅಗತ್ಯ: ರಘುವೀರ ನಾಯಕ...

ಕಲ್ಯಾಣ ಕರ್ನಾಟಕದ ವಾಲ್ಮೀಕಿ ನಾಯಕ ಸಮುದಾಯಕ್ಕೂ ಪೌಷ್ಠಿಕ ಆಹಾರ ಕಿಟ್ ವಿಸ್ತರಣೆ ಅಗತ್ಯ: ರಘುವೀರ ನಾಯಕ ಒತ್ತಾಯ

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶದ ಬುಡಕಟ್ಟು ಸಮುದಾಯವಾದ ವಾಲ್ಮೀಕಿ ನಾಯಕ ಸಮುದಾಯಕ್ಕೂ ಪೌಷ್ಠಿಕ ಆಹಾರ ಕಿಟ್ ಯೋಜನೆಯನ್ನು ವಿಸ್ತರಿಸಿ ಅಪೌಷ್ಠಿಕತೆಯಿಂದ ರಕ್ಷಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಮೂಲಕ 2008ರಿಂದ ಹಂತ ಹಂತವಾಗಿ ಕೆಲವು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಪೌಷ್ಠಿಕ ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ವಿವರಿಸಿದರು. ಕೊರಗ, ಜೇನುಕುರುಬ, ಕಾಡುಕುರುಬ, ಸೋಲಿಗ, ಎರವ, ಸಿದ್ದಿ, ಮಲೆಕುಡಿಯಾ, ಗೊಂಡ, ಹಸಲರು, ಕುಡಿಯ, ಗೌಡಲು ಹಾಗೂ ಬೆಟ್ಟಕುರುಬ ಸೇರಿ 12 ಬುಡಕಟ್ಟು ಸಮುದಾಯಗಳು ಈಗಾಗಲೇ ಈ ಸೌಲಭ್ಯ ಪಡೆಯುತ್ತಿವೆ ಎಂದು ಹೇಳಿದರು.
ಯೋಜನೆಯಡಿ ರಾಗಿ, ಅಕ್ಕಿ, ಗೋಧಿ, ತೊಗರಿಬೇಳೆ, ಕಡ್ಲೆಕಾಳು, ಕಡ್ಲೆಬೀಜ, ಅಲಸಂದೆಕಾಳು, ಹುರುಳಿಕಾಳು, ಹೆಸರುಕಾಳು, ಸಕ್ಕರೆ, ಬೆಲ್ಲ, ಮೊಟ್ಟೆ, ಸೂರ್ಯಕಾಂತಿ ಎಣ್ಣೆ ಹಾಗೂ ನಂದಿನಿ ತುಪ್ಪ ನೀಡಲಾಗುತ್ತಿದೆ. ಅಪೌಷ್ಠಿಕತೆ ತಡೆಗಟ್ಟುವ ಸರ್ಕಾರದ ಈ ಕ್ರಮ ಸ್ವಾಗತಾರ್ಹವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
371(ಜೆ) ಕಾಯ್ದೆಯಡಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಉದ್ಯೋಗದೃಷ್ಟಿಯಿಂದ ಹಿಂದುಳಿದ ಪ್ರದೇಶವೆಂದು ಘೋಷಿಸಲಾಗಿದೆ. ಈ ಭಾಗದ ರಾಯಚೂರು, ಯಾದಗಿರಿ, ಕಲಬುರ್ಗಿ, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ವಾಲ್ಮೀಕಿ ನಾಯಕ ಸಮುದಾಯಕ್ಕೂ ಪೌಷ್ಠಿಕ ಆಹಾರ ಕಿಟ್ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ಕುಲಕಸುಬು ಕಳೆದುಕೊಂಡ ಪರಿಣಾಮ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಮಹಿಳೆಯರಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಾಣಿಸುತ್ತಿದೆ. ಉದ್ಯೋಗಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಗ್ರಾಮಗಳಲ್ಲಿ ಉಳಿಯುವ ವೃದ್ಧರು ಸರಿಯಾದ ಪೌಷ್ಠಿಕ ಆಹಾರವಿಲ್ಲದೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ವಾಲ್ಮೀಕಿ ನಾಯಕ ಸಮುದಾಯಕ್ಕೂ ಪೌಷ್ಠಿಕ ಆಹಾರ ಕಿಟ್ ಯೋಜನೆ ಘೋಷಿಸಿ ತಕ್ಷಣ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.
ಈ ವೇಳೆ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ನಾಯಕ, ರಾಮು ನಾಯಕ, ರಮೇಶ್ ನಾಯಕ, ನರೇಂದ್ರ ನಾಯಕ, ಬೋಳಬಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಟ್ಯಾಗ್ಸ್…

ರಾಯಚೂರು, ಕಲ್ಯಾಣಕರ್ನಾಟಕ, ವಾಲ್ಮೀಕಿನಾಯಕ, ಪೌಷ್ಠಿಕಆಹಾರಕಿಟ್, ಅಪೌಷ್ಠಿಕತೆ, ಬುಡಕಟ್ಟುಸಮುದಾಯ, 371ಜೆ, ಸರ್ಕಾರದಯೋಜನೆ, ಸಮಾಜಕಲ್ಯಾಣ, ಬಜೆಟ್‌ಬೇಡಿಕೆ, Raichur, KalyanaKarnataka, ValmikiNayak, NutritionKit, Malnutrition, TribalCommunity, Article371J, GovernmentSchemes, SocialWelfare, BudgetDemand

RELATED ARTICLES
- Advertisment -
Google search engine

Most Popular

Recent Comments