ಕಲಬುರಗಿ: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಜನರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ರವಿವಾರ ಚಿತ್ತಾಪುರ ಪಟ್ಟಣದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ತಾಪುರ ಮತಕ್ಷೇತ್ರದ ವಿವಿಧ ಇಲಾಖೆಗಳ ₹1,069.41 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚಿತ್ತಾಪುರ ಕ್ಷೇತ್ರದಲ್ಲಿಯೇ ಇಂದು ಸುಮಾರು ₹365 ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ಅಡಿಯಲ್ಲಿ ರಾಜ್ಯದಲ್ಲಿ 2,000 ಕೆಪಿಎಸ್ ಶಾಲೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 330 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. 5,800 ಶಿಕ್ಷಕರ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ 2.50 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಯೋಜನೆಯಿದೆ ಎಂದು ಹೇಳಿದರು.
ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಪ್ರತಿ ವರ್ಷ ಸುಮಾರು ₹52,000 ಕೋಟಿ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಖರ್ಚು ಮಾಡುತ್ತಿದೆ. ಆದರೂ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಚಿತ್ತಾಪುರ ಕ್ಷೇತ್ರದಲ್ಲಿಯೇ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು ₹2,000 ಕೋಟಿ ಅನುದಾನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯಕ್ಷಮತೆಯನ್ನು ಮೆಚ್ಚಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಮಾನತೆ ಮತ್ತು ತತ್ವಾಧಾರಿತ ರಾಜಕಾರಣವನ್ನು ರಾಜ್ಯಕ್ಕೆ ನೀಡಿದ ಚಿತ್ತಾಪುರ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ವಿಶ್ವ ಶಾಂತಿಗೆ ಗಾಂಧಿ ತತ್ವ ಅಗತ್ಯ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಸ್ತುತ ವಿಶ್ವದ ಹಲವೆಡೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧದಿಂದ ಯಾರಿಗೂ ಲಾಭವಾಗುವುದಿಲ್ಲ. ಅಭಿವೃದ್ಧಿಗೆ ಅದು ಮಾರಕವಾಗುತ್ತದೆ. ಇಂತಹ ಸಂದರ್ಭದಲ್ಲಿ ವಿಶ್ವ ಶಾಂತಿಗೆ ಮಹಾತ್ಮ ಗಾಂಧಿ ಅವರ ಅಹಿಂಸೆ ತತ್ವ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅಮೆರಿಕಾದಿಂದ ಭಾರತೀಯ ಕೃಷಿ ಉತ್ಪನ್ನಗಳಾದ ತೊಗರಿ, ಅಕ್ಕಿ, ಹೆಸರು ಹಾಗೂ ಉದ್ದು ರಫ್ತಿಗೆ ತೆರಿಗೆ ಕಡಿಮೆ ಮಾಡುವ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಖನಿಜ ಪರಿಶೋಧನಾ ಸಾಮರ್ಥ್ಯ ಹೆಚ್ಚಳಕ್ಕೆ ಮ್ಯಾಗ್ನೆಟಿಕ್ ಸೆನ್ಸರ್ ಬಳಸಿ ಹೆಲಿಕಾಪ್ಟರ್ ಸರ್ವೆ
ಗ್ಯಾರಂಟಿ ಯೋಜನೆಗಳು ಜನರ ಬದುಕು ಕಟ್ಟಿಕೊಡುತ್ತಿವೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸ್ಥಿರತೆಗಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರ ಬದುಕು ಕಟ್ಟಿಕೊಡುವ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲಾಗುವುದಿಲ್ಲ ಎಂದರು. ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 17.50 ಲಕ್ಷ ರೈತರಿಗೆ ₹2,590 ಕೋಟಿ ಪರಿಹಾರ ನೀಡಲಾಗಿದೆ. ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ₹1 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕಾಮಗಾರಿಗಳ ವಿವರ: ಕಾರ್ಯಕ್ರಮದಲ್ಲಿ ಸುಮಾರು 20 ಇಲಾಖೆಗಳ 777 ಹೊಸ ಕಾಮಗಾರಿಗಳಿಗೆ ₹979.83 ಕೋಟಿ ಮೊತ್ತದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಜೊತೆಗೆ 8 ಇಲಾಖೆಗಳ ಮೂಲಕ ಪೂರ್ಣಗೊಂಡ 23 ಕಾಮಗಾರಿಗಳನ್ನು ₹89.57 ಕೋಟಿ ವೆಚ್ಚದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದರೊಂದಿಗೆ ಚಿತ್ತಾಪುರ ಕ್ಷೇತ್ರದಲ್ಲಿ ರಸ್ತೆ, ನೀರಾವರಿ, ಆರೋಗ್ಯ, ಕುಡಿಯುವ ನೀರು, ಗೃಹ ನಿರ್ಮಾಣ ಮತ್ತು ಗ್ರಾಮೀಣ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪುರ, ಶಾಸಕಿ ಕನೀಜ್ ಫಾತೀಮಾ, ಬಾಬುರಾವ ಚಿಂಚನಸೂರು, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಚೆನ್ನಾರೆಡ್ಡಿ ತುನ್ನೂರ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಮ್ಮಣ್ಣಪ್ಪ ಕಮಕನೂರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.



Recent Comments